ಬೆಂಗಳೂರು : ಕೆಲ ಬಿಜೆಪಿ ಮುಖಂಡರು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಪದೇಪದೆ ಪ್ರಚೋದನಾಕಾರಿ ಮತ್ತು ದ್ವೇಷಪೂರಿತ ಭಾಷಣ ಮಾಡುತ್ತಿದ್ದಾರೆ. ಆ ಮೂಲಕ ಸಮಾಜದಲ್ಲಿ ತಾರತಮ್ಯ, ಕೋಮುದ್ವೇಷ ಮತ್ತು ಅಶಾಂತಿ ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನಿವಾಸಿ ಮೊಹಮ್ಮದ್ ಖಲೀವುಲ್ಲಾ ಎಂಬುವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರಿದ್ದ ಪೀಠ, ಈ ಪ್ರಕರಣದಿಂದ ಅರ್ಜಿದಾರರು ಯಾವ ರೀತಿ ತೊಂದರೆಗೆ ಒಳಗಾಗಿದ್ದಾರೆ? ಎಂಬ ಕುರಿತು ಸ್ಪಷ್ಟನೆ ಕೇಳಿ ಕಚೇರಿ ಆಕ್ಷೇಪಣೆ ಎತ್ತಿದೆ. ಅದನ್ನು ಪರಿಹರಿಸಿ ಎಂದು ಅರ್ಜಿದಾರರ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿದೆ.
ಬಿಜೆಪಿ ನಾಯಕರಾದ ಕೆ.ಎಸ್. ಈಶ್ವರಪ್ಪ, ಶೋಭಾ ಕರಂದ್ಲಾಜೆ, ಬಸವನಗೌಡ ಪಾಟೀಲ್ ಯತ್ನಾಳ್, ಸಿ.ಟಿ.ರವಿ, ಎಂ.ಪಿ. ರೇಣುಕಾಚಾರ್ಯ, ತೇಜಸ್ವಿಸೂರ್ಯ, ಪ್ರತಾಪ್ ಸಿಂಹ, ರಿಷಿಕುಮಾರ್ ಸ್ವಾಮೀಜಿ, ಪ್ರಮೋದ್ ಮುತಾಲಿಕ್ ಮತ್ತು ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರ್ಕಾರಕ್ಕೆ ಆದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ.










