ಮೈಸೂರು: ನನಗೂ ಮತ್ತು ನನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಭ್ರಷ್ಟಾಚಾರ ಕುರಿತು ಹೋರಾಟ ಮಾಡುತ್ತಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದೂರು ದಾಖಲಿಸಿದ್ದಕ್ಕಾಗಿ ತಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. ಹೀಗಾಗಿ, ತನಗೆ ಮತ್ತು ತನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಮೈಸೂರು ಪೊಲೀಸ್ ಸಿಬ್ಬಂದಿಯವರಿಗೆ ಮನವಿ ಮಾಡಿದ್ದಾರೆ. ಗನ್ ಮ್ಯಾನ್ ನೀಡುವಂತೆ ಕೇಳಿದ್ದೆ. ಆದರೆ, ಯಾವ ಭದ್ರತೆಯನ್ನು ತನಗೆ ನೀಡಿಲ್ಲ ಎಂದು ಸ್ನೇಹಮಯಿ ಕೃಷ್ಣ ಪತ್ರದಲ್ಲಿ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ನನಗೂ ಮತ್ತು ನನ್ನ ಕುಟುಂಬಕ್ಕೆ ಸುರಕ್ಷತೆಯನ್ನು ಕೋರಿ ಪತ್ರದ ಮೂಲಕ ಪ್ರಧಾನಿ ಮೋದಿಯವರಿಗೆ ಮನವಿ ಸಲ್ಲಿಸಿದ್ದಾರೆ. ನನ್ನ ಮತ್ತು ನನ್ನ ಕುಟುಂಬದ ರಕ್ಷಣೆ ಮತ್ತು ಯೋಗಕ್ಷೇಮದ ಬಗ್ಗೆ ಗಂಭೀರ ಕಾಳಜಿಯಿಂದ ನಾನು ನಿಮಗೆ ಪತ್ರ ಬರೆಯುತ್ತಿದ್ದೇನೆ. ನಮಗೆ ಅಗತ್ಯ ಭದ್ರತಾ ಕ್ರಮಗಳನ್ನು ಒದಗಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದರೂ, ನಮಗೆ ಯಾವುದೇ ಸಹಾಯವನ್ನು ಸರ್ಕಾರ ನಿರಾಕರಿಸಿದ್ದಾರೆ. ಮತ್ತು ಈಗ ನಮ್ಮ ಜೀವವು ಅಪಾಯದಲ್ಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹಾಲಿ ಮುಖ್ಯಮಂತ್ರಿ ಹಾಗೂ ಇತರ ಪ್ರಭಾವಿ ವ್ಯಕ್ತಿಗಳ ವಿರುದ್ಧ ನಾನು ದೂರು ದಾಖಲಿಸಿರುವುದರಿಂದ ರಾಜ್ಯ ಸರ್ಕಾರ ನನಗೆ ರಕ್ಷಣೆ ನೀಡಲು ನಿರಾಕರಿಸುತ್ತಿದೆ. ರಾಜ್ಯ ಸರ್ಕಾರದ ಭದ್ರತೆಯನ್ನು ಅವಲಂಬಿಸುವುದು ತನಗೆ ಮತ್ತು ತನ್ನ ಕುಟುಂಬಕ್ಕೆ ಹೆಚ್ಚು ಅಪಾಯಕಾರಿ ಎಂದು ತೋರುತ್ತದೆ. ಆದ್ದರಿಂದ, ನನ್ನ ಪ್ರಾಣವನ್ನು ರಕ್ಷಿಸಲು ಮತ್ತು ಸಮಾಜದೊಳಗೆ ನನ್ನ ಕುಟುಂಬದ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಕರುಣೆಯಿಂದ ರಕ್ಷಣೆಯನ್ನು ಒದಗಿಸಬೇಕೆಂದು ನಾನು ವಿನಂತಿಸುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.










