ಪ್ರಧಾನಿ ಮೋದಿಯಿಂದ 3 ಪರಮ್ ರುದ್ರ ಸೂಪರ್ ಕಂಪ್ಯೂಟರ್‌ಗಳ ಬಿಡುಗಡೆ.

35

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಮೂರು ಪರಮ್ ರುದ್ರ ಸೂಪರ್‍ಕಂಪ್ಯೂಟರ್‍ಗಳಿಗೆ ಚಾಲನೆ ನೀಡಿದರು. ಇದು ರಾಷ್ಟ್ರೀಯಸೂಪರ್‌ಕಂಪ್ಯೂಟಿಂಗ್ ಮಿಷನ್ (NSM) ಅಡಿಯಲ್ಲಿ ಭಾರತದ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಗೆ ಮಹತ್ವದ ಹೆಜ್ಜೆಯಾಗಿದೆ. 130 ಕೋಟಿ ರೂ. ವೆಚ್ಚದಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಈ ಸೂಪರ್‍ಕಂಪ್ಯೂಟರ್‍ಗಳನ್ನು ಪುಣೆ, ದೆಹಲಿ ಮತ್ತು ಕೋಲ್ಕತ್ತಾದಲ್ಲಿ ಅನೇಕ ವೈಜ್ಞಾನಿಕ ವಿಭಾಗಗಳಲ್ಲಿ ಸಂಶೋಧನೆಗಳನ್ನು ನಡೆಸಲು ನಿಯೋಜಿಸಲಾಗಿದೆ. ತಂತ್ರಜ್ಞಾನ ಮತ್ತು ಕಂಪ್ಯೂಟಿಂಗ್ ಸಾಮರ್ಥ್ಯವನ್ನು ಅವಲಂಬಿಸದ ಯಾವುದೇ ಕ್ಷೇತ್ರವಿಲ್ಲ ಎಂದು ವಿಡಿಯೋ ಕಾನ್ಫರೆನ್ಸ್‍ನಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ತಂತ್ರಜ್ಞಾನದ ಕ್ರಾಂತಿಯಲ್ಲಿ, ನಮ್ಮ ಪಾಲು ಬಿಟ್‍ಗಳು ಮತ್ತು ಬೈಟ್‍ಗಳಲ್ಲಿರಬಾರದು. ಅದರ ಬದಲು ಟೆರಾಬೈಟ್‍ಗಳು ಮತ್ತು ಪೆಟಾಬೈಟ್‍ಗಳಲ್ಲಿರಬೇಕು. ಆದ್ದರಿಂದ ನಾವು ಸರಿಯಾದ ದಿಕ್ಕಿನಲ್ಲಿ ಸರಿಯಾದ ವೇಗದಲ್ಲಿ ಸಾಗುತ್ತಿದ್ದೇವೆ ಎಂಬುದನ್ನು ಈ ಸಾಧನೆ ಸಾಬೀತುಪಡಿಸುತ್ತದೆ ಎಂದಿದ್ದಾರೆ. ಪರಮ್ ರುದ್ರ ಸೂಪರ್ ಕಂಪ್ಯೂಟರ್‌ಗಳು ಮತ್ತು ಎಚ್‍ಪಿಸಿ ಸಿಸ್ಟಮ್‍ನೊಂದಿಗೆ ಭಾರತವು ಕಂಪ್ಯೂಟಿಂಗ್‍ನಲ್ಲಿ ಸ್ವಾವಲಂಬನೆಯತ್ತ ಮಹತ್ವದ ಹೆಜ್ಜೆ ಇಡುತ್ತದೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆವಿಷ್ಕಾರ ಮಾಡುತ್ತದೆ ಎಂದು ನರೇಂದ್ರ ಮೋದಿ ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಮಿಷನ್, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಡುವಿನ ಸಹಯೋಗದೊಂದಿಗೆ ಭಾರತದಾದ್ಯಂತ ಸುಧಾರಿತ ಕಂಪ್ಯೂಟಿಂಗ್ ಸಿಸ್ಟಮ್‍ಗಳ ಜಾಲವನ್ನು ರಚಿಸುವ ಗುರಿಯನ್ನು ಹೊಂದಲಾಗಿದೆ. ಪ್ರಧಾನಿ ಆರಂಭದಲ್ಲಿ ಮಹಾರಾಷ್ಟ್ರದ ಪುಣೆಗೆ ಭೇಟಿ ನೀಡಿ ಪರಮ್ ರುದ್ರ ಬಿಡುಗಡೆಗೆ ಪ್ಲಾನ್ ಮಾಡಿದ್ದರು. ಆದರೆ ಭಾರೀ ಮಳೆಯಿಂದಾಗಿ ಅವರು ತಮ್ಮ ಪ್ರವಾಸವನ್ನು ರದ್ದುಗೊಳಿಸಬೇಕಾಯಿತು. ಹೀಗಾಗಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಮಾತನಾಡಿದ್ದಾರೆ.