ನವದೆಹಲಿ : ಇಂದು ಪ್ರಧಾನಿ ನರೇಂದ್ರ ಮೋದಿಯವರ 72ನೇ ಹುಟ್ಟುಹಬ್ಬ. ಮೋದಿ ಅವರ ಜನ್ಮದಿನದ ಅಂಗವಾಗಿ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ರಾಷ್ಟ್ರಪತಿ ದ್ರೌಪದಿ ಸೇರಿದಂತೆ ಅನೇಕ ಗಣ್ಯರು ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್ ಮೂಲಕ ಪ್ರಧಾನಿ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. ನಿಮ್ಮ ನೇತೃತ್ವದಲ್ಲಿ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಸೃಜನಶೀಲತೆಯಿಂದ ರಾಷ್ಟ್ರ ನಿರ್ಮಾಣ ಅಭಿಯಾನ ನಡೆಯಬೇಕೆಂದು ನಾನು ಬಯಸುತ್ತೇನೆ. ನಿಮ್ಮ ನಾಯಕತ್ವದಲ್ಲಿ ದೇಶ ಪ್ರಗತಿಯನ್ನು ಮುಂದುವರೆಸಿದೆ. ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಜಿ ಅವರಿಗೆ ಜನ್ಮದಿನದ ಶುಭಾಶಯಗಳು. ದೇಶದ ಅತ್ಯಂತ ಪ್ರೀತಿಯ ನಾಯಕ ಮತ್ತು ನಮ್ಮೆಲ್ಲರ ಸ್ಫೂರ್ತಿಯಾಗಿರುವ ಮೋದಿ ಅವರಿಗೆ ಉತ್ತಮ ಆರೋಗ್ಯ ಮತ್ತು ದೇವರಿಂದ ದೀರ್ಘಾಯುಷ್ಯ ಸಿಗಲಿ. ಮೋದಿ ಅವರು ತಮ್ಮ ಚಿಂತನೆ ಮತ್ತು ಬಡವರ ಕಲ್ಯಾಣದ ದೃಢಸಂಕಲ್ಪದಿಂದ ಅಸಾಧ್ಯವಾದ ಕಾರ್ಯಗಳನ್ನು ಸಾಧ್ಯವೆಂದು ತೋರಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅವರ ಜನ್ಮದಿನದಂದು ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. ಅವರು ತಮ್ಮ ನೇತೃತ್ವದಲ್ಲಿ ದೇಶದ ಪ್ರಗತಿ ಮತ್ತು ಉತ್ತಮ ಆಡಳಿತಕ್ಕೆ ಅಭೂತಪೂರ್ವ ಶಕ್ತಿಯನ್ನು ನೀಡಿದ್ದಾರೆ. ದೇವರು ಅವರಿಗೆ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಲಿ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ನಮ್ಮ ಪ್ರಧಾನ ಮಂತ್ರಿಗಳಿಗೆ ಜನ್ಮ ದಿನದ ಶುಭ ಹಾರೈಕೆಗಳು. ನಿಮ್ಮ ದೃಷ್ಟಿಕೋನ, ನಾಯಕತ್ವ ಮತ್ತು ಶಕ್ತಿಯು ರಾಷ್ಟ್ರೀಯ ಪುನರುಜ್ಜೀವನವನ್ನು ಕೈಗೊಂಡ ಭಾರತಕ್ಕೆ ಸ್ಫೂರ್ತಿಯಾಗಿದೆ. ಜಾಗತಿಕ ವೇದಿಕೆಯಲ್ಲಿ ಭಾರತದ ಸ್ಥಾನಮಾನ ಹೆಚ್ಚಾಗಿರುವುದಕ್ಕೆ ಮೋದಿಯವರ ಪ್ರಭಾವವು ಎಷ್ಟಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಕೇಂದ್ರ ಸಚಿವ ಡಾ. ಎಸ್. ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ಧೀಮಂತ ನಾಯಕ, ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ಜನತೆಯ ಪರವಾಗಿ ಜನ್ಮದಿನದ ಶುಭಾಶಯಗಳು. ಅವರಿಗೆ ಆಯುಷ್ಯ, ಆರೋಗ್ಯ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ನಮ್ಮ ಪ್ರೀತಿಯ ನಾಯಕ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮ್ಮ ನಾಯಕತ್ವ, ಬದ್ಧತೆ ಮತ್ತು ದೂರದೃಷ್ಟಿ ರಾಷ್ಟ್ರಕ್ಕೆ ಸ್ಫೂರ್ತಿ ನೀಡುತ್ತದೆ. ನಿಮ್ಮ ಉತ್ತಮ ಆರೋಗ್ಯ ಮತ್ತು ರಾಷ್ಟ್ರವನ್ನು ಮುನ್ನಡೆಸುವಲ್ಲಿ ದೀರ್ಘಾಯುಷ್ಯಕ್ಕಾಗಿ ನಾನು ಪ್ರಾರ್ಥಿಸುವೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಹಿನ್ನಲೆ ತಮಿಳುನಾಡು ಬಿಜೆಪಿ ಘಟಕ ಮಹತ್ವದ ನಿರ್ಧಾರ ಕೈಗೊಂಡಿದೆ. ಚೆನ್ನೈನ ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟುವ ಮಕ್ಕಳಿಗೆ ಚಿನ್ನದ ಉಂಗುರ ನೀಡಲು ನಿರ್ಧರಿಸಿದೆ. ಚೆನ್ನೈನಲ್ಲಿರುವ ಆರ್ ಎಸ್ ಆರ್ ಎಂ ಆಸ್ಪತ್ರೆಯಲ್ಲಿ ಇಂದು ಹುಟ್ಟುವ ಎಲ್ಲ ಮಕ್ಕಳಿಗೆ 2 ಗ್ರಾಂ. ನಷ್ಟು ತೂಕದ ಚಿನ್ನದ ಉಂಗುರ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಮಿಳುನಾಡು ಬಿಜೆಪಿ ತಿಳಿಸಿದೆ.
ಇನ್ನೂ ಈ ವಿಶೇಷ ದಿನದಂದು ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು ಸಂರಕ್ಷಣೆ ಮಾಡುವ ಯೋಜನೆಯಡಿ ನಮೀಬಿಯಾದಿಂದ 8 ಚಿರತೆಗಳನ್ನು ಭಾರತಕ್ಕೆ ತರಲಾಗಿದೆ. ಮಧ್ಯಪ್ರದೇಶದ ಕುನ್ಹೋ-ಪಾಲ್ ಪುರ್ ವನ್ಯಜೀವಿ ಸಂರಕ್ಷಣಾ ಕೇಂದ್ರದಲ್ಲಿ ಈ ಚಿರತೆಗಳನ್ನು ಬಿಡಲಾಗುತ್ತದೆ. ಎರಡರಿಂದ ಆರು ವರ್ಷ ವಯಸ್ಸಿನ ಮೂರು ಗಂಡು, ಐದು ಹೆಣ್ಣು ಚಿರತೆಗಳನ್ನು ನಮೀಬಿಯಾದಿಂದ ವಿಶೇಷ ವಿಮಾನದಲ್ಲಿ ತರಲಾಗಿದೆ. ನಮೀಬಿಯಾದಿಂದ 8,000 ಕಿಲೋಮೀಟರ್ ಪ್ರಯಾಣ ಮಾಡಿ ಚಿರತೆಗಳು ಭಾರತಕ್ಕೆ ಬಂದಿವೆ.