ಪ್ರಯಾಣಿಸುತ್ತಿರುವಾಗ ಮಹಿಳೆಗೆ ಕೊರೊನಾ – ವಿಮಾನದ ಬಾತ್​ರೂಮ್​ನಲ್ಲಿ ಕ್ವಾರಂಟೈನ್…

74
firstsuddi

ನ್ಯೂಯಾರ್ಕ್ : ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ವಿಮಾನದ ಬಾತ್​ರೂಮ್​ನಲ್ಲೇ ಕ್ವಾರಂಟೈನ್ ಆಗಿದ್ದಾರೆ.

ಮಿಚಿಗನ್ ಮೂಲದ ಶಿಕ್ಷಕಿ ಮಾರಿಸಾ ಫೋಟಿಯೊ ಎಂಬ ಮಹಿಳೆ ಡಿಸೆಂಬರ್.19ರಂದು ಚಿಕಾಗೊದಿಂದ ಐಸ್ ಲ್ಯಾಂಡ್ ಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ಅವರಿಗೆ ಗಂಟಲು ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ರ‍್ಯಾಪಿಡ್‌ ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ. ಪರಿಣಾಮ ಅವರನ್ನು ವಿಮಾನದ ಟಾಯ್ಲೆಟ್ ನಲ್ಲಿ ಐಸೊಲೇಟ್ ಮಾಡಲಾಗಿತ್ತು. ವಿಮಾನ ಪ್ರಯಾಣಕ್ಕೂ ಮುನ್ನ ಆರ್ ಟಿ-ಪಿಸಿಆರ್ ಹಾಗೂ ಐದು ಬಾರಿ ರ‍್ಯಾಪಿಡ್‌ ಪರೀಕ್ಷೆ ಮಾಡಿಸಿದಾಗ ವರದಿಯಲ್ಲಿ ನೆಗೆಟಿವ್ ಬಂದಿತ್ತು.

ಮಾರಿಸಾ ಅವರು ಕೋವಿಡ್ ಲಸಿಕೆಯ ಎರಡು ಡೋಸ್ ಹಾಗೂ ಬೂಸ್ಟರ್ ಡೋಸ್ ಕೂಡ ಪಡೆದುಕೊಂಡಿದ್ದಾರೆ. ಆದರೆ ಲಸಿಕೆ ಪಡೆಯದವರ ಸಂಪರ್ಕ ಹೊಂದಿದ್ದ ಕಾರಣದಿಂದಾಗಿ ಅವರಿಗೆ ಸೋಂಕು ತಗುಲಿದೆ.

ಚಲಿಸುತ್ತಿದ್ದ ವಿಮಾನದಲ್ಲಿದ್ದಾಗ ನನಗೆ ಕೋವಿಡ್ ತಗುಲಿರುವ ವಿಚಾರ ತಿಳಿದು ಅಳು ಬಂತು. ವಿಮಾನ ಪ್ರಯಾಣಕ್ಕೂ ಮುನ್ನ ನನ್ನ ಕುಟುಂಬದವರೊಂದಿಗೆ ಊಟ ಮಾಡಿದ್ದೆ. ವಿಮಾನದಲ್ಲಿ ಹಲವರ ಪ್ರಯಾಣ ಬೆಳೆಸುತ್ತಿದ್ದೇನೆ. ಈ ಎಲ್ಲಾ ವಿಷಯಗಳನ್ನು ನೆನೆದು ನನಗೆ ಭಯವಾಯಿತು ಎಂದು ಸೋಂಕಿತೆ ಹೇಳಿಕೊಂಡಿದ್ದಾರೆ.

ವಿಮಾನವು ಐಸ್ ಲ್ಯಾಂಡ್  ತಲುಪಿದ ನಂತರ ಫೋಟಿಯೋ ಅವರಿಗೆ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ರ‍್ಯಾಪಿಡ್‌ ಹಾಗೂ ಪಿಸಿಆರ್ ಟೆಸ್ಟ್ ಮಾಡಲಾಯಿತು. ಅವೆರಡರಲ್ಲೂ ಪಾಸಿಟಿವ್ ಬಂದ ಕಾರಣ ಸಮೀಪದ ಹೋಟೆಲ್ ನಲ್ಲಿ 10 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇಡಲಾಯಿತು. ಆಕೆಯ ಸಹೋದರ ಹಾಗೂ ತಂದೆಗೆ ಯಾವುದೇ ಲಕ್ಷಣಗಳು ಕಂಡುಬರದ ಕಾರಣ ಅವರು ಸ್ವಿಟ್ಜರ್ ಲ್ಯಾಂಡ್ ಗೆ ಸಂಪರ್ಕ ಕಲ್ಪಿಸುವ ವಿಮಾನದಲ್ಲಿ ಪ್ರಯಾಣ ಬೆಳೆಸಿದರು.