ದೂರದ ಜಿಲ್ಲೆಗೆ ವರ್ಗಾವಣೆ ; ನೊಂದ ಶಿಕ್ಷಕ ಹೃದಯಾಘಾತದಿಂದ ಸಾವು…

91
firstsuddi

ಹೈದರಾಬಾದ್ : ವರ್ಗಾವಣೆಗೊಂಡ ಮನನೊಂದ ಶಿಕ್ಷಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.

ಬಾನೋತ್ ಜೆತ್ರಾ (57) ಮೃತ ಶಿಕ್ಷಕ. ಇವರು ಮಹಬೂಬಾಬಾದ್ ಜಿಲ್ಲೆಯ ನೆಲ್ಲಿಕುದುರು ಮಂಡಲದ ಚಿನ್ನ ಮುಪ್ಪರಂ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಇತ್ತೀಚೆಗೆ ಇವರನ್ನು ಮುಲುಗು ಜಿಲ್ಲೆಯ ಶಾಲೆಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿತ್ತು. ಅಂದಿನಿಂದ ಪ್ರತಿದಿನ ದೂರದ ಊರಿಗೆ ಹೋಗುವುದು ಹೇಗೆ ಎಂದು ಅದರ ಬಗ್ಗೆಯೇ ಯೋಚಿಸುತ್ತಿದ್ದ ಬಾನೋತ್ ಅವರಿಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನಿನ್ನೆ ಹೃದಯಾಘಾತವಾಗಿದೆ. ಕೋಮಾ ಸ್ಥಿತಿಯಲ್ಲಿದ್ದ ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ನಮ್ಮ ತಾಯಿ ಅಂಗನವಾಡಿ ಶಿಕ್ಷಕಿ. ಗಂಡ-ಹೆಂಡತಿಗೆ ಇಬ್ಬರಿಗೂ ಒಂದೇ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ಅವಕಾಶವನ್ನು ಕಿತ್ತೊಗೆಯಬೇಡಿ ಎಂದು ತಂದೆ ಬಾನೋತ್ ಬೇಡಿಕೊಂಡಿದ್ದರು. ಅಷ್ಟೇ ಅಲ್ಲದೇ ಅವರು ಪಾರ್ಶ್ವವಾಯು ರೋಗದಿಂದ ಬಳಲುತ್ತಿರುವುದಾಗಿ ತಿಳಿಸಿದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಬಾನೋತ್ ಅವರ ಪುತ್ರ ಅಳಲು ತೋಡಿಕೊಂಡಿದ್ದಾರೆ.