ಹೊಸ ವರ್ಷಾಚರಣೆಗೆ ಫುಲ್ ಬ್ರೇಕ್ – ಇಂದು ಸಂಜೆ 6ಗಂಟೆಯಿಂದಲೇ ಕಟ್ಟುನಿಟ್ಟಿನ ನಿರ್ಬಂಧ…

75
firstsuddi

ಬೆಂಗಳೂರು : ಈ ಬಾರಿ ಹೊಸವರ್ಷ ಆಚರಣೆಗೆ ಫುಲ್ ಬ್ರೇಕ್ ಬಿದ್ದಿದೆ. ಕೊರೊನಾ ರೂಪಾಂತರಿ ಓಮಿಕ್ರಾನ್ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿರುವ ರಾಜ್ಯ ಸರ್ಕಾರ ಇದೀಗ ಹೊಸ ವರ್ಷ ಸಂಭ್ರಮಾಚರಣೆಗೆ ಕಡಿವಾಣ ಹಾಕಲು ಮುಂದಾಗಿದೆ.

ಇಂದಿನಿಂದ ಸಂಜೆ 6ರಿಂದ ಮುಂಜಾನೆ 5ರವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಐದು ಅಥವಾ 5ಕ್ಕಿಂತ ಹೆಚ್ಚು ಜನ ಸೇರಿ ಹೊಸ ವರ್ಷದ ಯಾವುದೇ ರೀತಿಯ ಸಂಭ್ರಮಾಚರಣೆ ಮಾಡದಂತೆ ನಿಷೇಧ ಹೇರಿದೆ. ಈ ಸಂಬಂಧ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಆದೇಶ ಹೊರಡಿಸಿದ್ದು, ಇಂದು ಸಂಜೆ 6 ಗಂಟೆಯಿಂದ ನಾಳೆ ಬೆಳಗ್ಗೆ 5 ಗಂಟೆಯವರೆಗೆ ಸಾರ್ವಜನಿಕ ಸಭೆಗಳನ್ನು ನಿಷೇಧಿಸಿದ್ದಾರೆ.

ನಗರದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಇಂದಿರಾನಗರ, ಕೋರಮಂಗಲದಲ್ಲಿ ಸಂಜೆ 6 ಗಂಟೆಯಿಂದ ರಸ್ತೆಗಳನ್ನು ಮುಚ್ಚಲಾಗುತ್ತದೆ. ಜನರು ತಮ್ಮ ಮನೆಯೊಳಗೆ ಅಥವಾ ಕ್ಲಬ್ ಗಳಲ್ಲಿ ಪಾರ್ಟಿ ನಡೆಸಬಹುದು. ಹೊಸ ವರ್ಷಕ್ಕಾಗಿ ಬೆಂಗಳೂರಿನ ಯಾವುದೇ ಹೋಟೆಲ್‌ಗಳು, ಮಾಲ್‌ಗಳು, ರೆಸ್ಟೋರೆಂಟ್‌ಗಳು, ಕ್ಲಬ್‌ಗಳು ಅಥವಾ ಯಾವುದೇ ರೀತಿಯ ಸಂಸ್ಥೆಗಳು ವಿಶೇಷ ಡಿಜೆ, ಈವೆಂಟ್‌ಗಳು ಅಥವಾ ಪಾರ್ಟಿಗಳನ್ನು ಆಯೋಜಿಸುವಂತಿಲ್ಲ.

ಇಂದು ಸಂಜೆ ಪಬ್, ರೆಸ್ಟೊರೆಂಟ್ ಗಳಲ್ಲಿ ಮುಂಗಡ ಕಾಯ್ದಿರಿಸಿಕೊಂಡಿದ್ದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಟಿಕೆಟ್ ಬುಕ್ ಮಾಡಿರುವವರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ತೆಗೆದುಕೊಂಡಿರಬೇಕು. ಇನ್ನು ರಾತ್ರಿ 10ರವರೆಗೆ ಹೋಟೆಲ್, ಪಬ್, ಕ್ಲಬ್, ರೆಸ್ಟೋರೆಂಟ್, ಮಾಲ್ ಗಳು ಕಾರ್ಯನಿರ್ವಹಿಸಬುದು. ನೈಟ್ ಕರ್ಫ್ಯೂ ಜಾರಿಯಾದ ಬಳಿಕ ಬಾಗಿಲು ಮುಚ್ಚಬೇಕು ಎಂದು ಸೂಚಿಸಲಾಗಿದೆ.

ಒಂದು ವೇಳೆ ಆದೇಶ ಹಾಗೂ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದರೆ, ವಿಪತ್ತು ನಿರ್ವಹಣೆ ಕಾಯ್ದೆ ಹಾಗೂ ಸಾಂಕ್ರಾಮಿಕ ರೋಗ ಕಾಯ್ದೆ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.