ಪ್ರವೀಣ್ ನೆಟ್ಟಾರು ಹತ್ಯೆ ಅತ್ಯಂತ ಹೇಯ ಕೃತ್ಯ : ಬಿ.ರಾಜಪ್ಪ.

92
firstsuddi

ಚಿಕ್ಕಮಗಳೂರು : ಮಂಗಳೂರಿನ ಬೆಳ್ಳಾರೆಯಲ್ಲಿ ಹಿಂದೂ ಪರ ಕಾರ್ಯಕರ್ತ ಹಾಗೂ ಬಿಲ್ಲವ ಸಮಾಜದ ಯುವಕ ಪ್ರವೀಣ್ ನೆಟ್ಟಾರುರವರ ಹತ್ಯೆಯು ಅತ್ಯಂತ ಹೇಯ ಕೃತ್ಯವಾಗಿದೆ ಎಂದು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಸಂಘಟನಾ ಕಾರ್ಯದರ್ಶಿ ಬಿ.ರಾಜಪ್ಪ ತಿಳಿಸಿದ್ದಾರೆ.

ಈ ಕುರಿತು ಅವರು ಪತ್ರಿಕಾ ಹೇಳಿಕೆ ನೀಡಿ, ಕಳೆದ ಹಲವಾರು ವರ್ಷಗಳಿಂದ ಹಿಂದುಳಿದ ವರ್ಗಕ್ಕೆ ಸೇರಿದ ಬಿಲ್ಲವ ಸಮುದಾಯದ ಯುವಕರು ನಿರಂತರವಾಗಿ ಕೋಮು ದಳ್ಳುರಿಗೆ ಬಲಿಯಾಗುತ್ತಿರುವುದು ಅತ್ಯಂತ ದುರದೃಷ್ಟಕರ ಸಂಗತಿ ಎಂದು ತಿಳಿಸಿದ್ದಾರೆ.

ಬಿಲ್ಲವ, ಈಡಿಗ ಸೇರಿದಂತೆ ಹಲವಾರು ಉಪ ಪಂಗಡಗಳನ್ನು ಒಳಗೊಂಡಿರುವ ಆರ್ಯ ಈಡಿಗರ ಸಮಾಜ ಅತ್ಯಂತ ಹಿಂದುಳಿದ ವರ್ಗವಾಗಿದ್ದು, ಇತ್ತೀಚೆಗೆ ಆರ್ಥಿಕವಾಗಿಯೂ ಕೂಡ ಹೀನಾಯ ಪರಿಸ್ಥಿತಿಯನ್ನು ಎದುರಿಸುತ್ತಾ ಜೀವನ ಸಾಗಿಸುತ್ತಿರುವ ಸಂದರ್ಭದಲ್ಲಿ ಸರಣಿಯಾಗಿ ನಮ್ಮ ಸಮುದಾಯದ ಯುವಕರು ಕೋಮು ದ್ವೇಷಕ್ಕೆ ಬಲಿಪಶುವಾಗುತ್ತಿರುವುದು ನಮ್ಮ ಸಮುದಾಯವನ್ನು ಚಿಂತೆಗೀಡು ಮಾಡಿದೆ. ಕಳೆದ 15 ವರ್ಷಗಳಿಂದ ರಾಜ್ಯದಲ್ಲಿ ವಿಶೇಷವಾಗಿ ಕರಾವಳಿ ಪ್ರದೇಶದಲ್ಲಿ ಸುಮಾರು 18 ಯುವಕರ ರಕ್ತ ಹರಿದಿದ್ದು, ಬಡ ಕುಟುಂಬಗಳ ಆಸರೆಯಾಗಿದ್ದ ಹಾಗೂ ಈ ರೀತಿ ದುರಂತ ಸಾವಿಗೀಡಾದ ಯುವಕರು ನಮ್ಮ ಸಮುದಾಯದವರಾಗಿದ್ದು, ಇವರೆಲ್ಲರ ಕುಟುಂಬಗಳು ಈಗ ಆಸರೆ ಕಳೆದುಕೊಂಡು ತಬ್ಬಲಿಯಾಗಿರುವುದು ದುರಂತವಾಗಿದೆ.

ಹತ್ಯೇಗೀಡಾದ ಸಂದರ್ಭಗಳಲ್ಲಿ ಈ ಯುವಕರನ್ನು ರಾಜಕೀಯವಾಗಿ ಬಳಸಿಕೊಂಡವರೂ ಕೂಡ ಅವರುಗಳ ಕುಟುಂಬಕ್ಕೆ ಅರೆಹೊಟ್ಟೆಯ ಪರಿಹಾರ ನೀಡಿ ಕೈ ತೊಳೆದಿಕೊಳ್ಳುವುದನ್ನು ಬಿಟ್ಟರೆ ಶಾಶ್ವತ ಪರಿಹಾರ ನೀಡದಿರುವುದು ಖಂಡನೀಯವಾಗಿದೆ.

ಸರಣಿ ಕೊಲೆಗಳ ಸಾಲಿಗೆ ಈಗ ಪ್ರವೀಣ್ ಎಂಬ ನಮ್ಮ ಸಮುದಾಯದ ಮತ್ತೊಂದು ಯುವಕ ಸೇರ್ಪಡೆಯಾಗಿದ್ದು, ಈತ ಇಡೀ ಕುಟುಂಬಕ್ಕೆ ಆಸರೆಯಾಗಿದ್ದ. ಆದುದ್ದರಿಂದ ಆಸರೆ ಕಳೆದುಕೊಂಡಿರುವ ಯುವಕನ ಪತ್ನಿ ಹಾಗೂ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ರಾಜಪ್ಪ ರವರು ತಮ್ಮ ಹೇಳಿಕೆಯಲ್ಲಿ ಒತ್ತಾಯಿಸಿ, ಹತ್ಯೆಯಾದ ಪ್ರವೀಣ್ ಪತ್ನಿಗೆ ವಿದ್ಯಾರ್ಹತೆಗೆ ತಕ್ಕಂತೆ ಸರ್ಕಾರಿ ಉದ್ಯೋಗ ಒದಗಿಸ ಬೇಕೆಂದು ಒತ್ತಾಯಿಸಿದ್ದಾರೆ.

ಕೊಲೆಗಾರರನ್ನು ತಕ್ಷಣ ಬಂಧಿಸಿ ಅವರನ್ನು ವಿಶೇಷ ನ್ಯಾಯಾಲಯದ ಮೂಲಕ ಶೀಘ್ರ ವಿಚಾರಣೆಗೊಳಪಡಿಸಿ ಉಗ್ರ ಶಿಕ್ಷೆಗೊಳಪಡಿಸ ಬೇಕೆಂದು ರಾಜಪ್ಪರವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ರೀತಿ ಘಟನೆಗಳು ಮರುಕಳಿಸದಂತೆ ರಾಜ್ಯ ಸರ್ಕಾರ ಎಚ್ಚರವಹಿಸ ಬೇಕು ಎಂದು ಅವರು ಆಗ್ರಹಿಸಿದ್ದಾರೆ.