ಬೆಂಗಳೂರು : ಸಮಾಜ ವಿರೋಧಿ ಶಕ್ತಿಗಳ ಅಮಾನುಷ ಕ್ರೌರ್ಯಕ್ಕೆ ಬಲಿಯಾದ ಬಿಜೆಪಿ ಕಾರ್ಯಕರ್ತ ಮತ್ತು ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಕುಟುಂಬಕ್ಕೆ ವೈಯಕ್ತಿಕವಾಗಿ 10 ಲಕ್ಷ ರೂ. ನೆರವು ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದನ್ನು ನೆರವು ಎಂದು ಹೇಳಲು ಇಷ್ಟ ಪಡುವುದಿಲ್ಲ. ಇದು ನನ್ನ ಕರ್ತವ್ಯವಾಗಿದೆ. 10 ಲಕ್ಷ ರೂ.ಗಳ ಚೆಕ್ ಅನ್ನು ಪ್ರವೀಣ್ ಅವರ ಕುಟುಂಬಕ್ಕೆ ತಲುಪಿಸಲಾಗುವುದು. ಅವರ ಬಲಿದಾನಕ್ಕೆ ನಾವು ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಭಾವುಕರಾದರು.
ಪ್ರವೀಣ್ ಹಂತಕರು ಎಲ್ಲೇ ಇದ್ದರೂ ಕಠಿಣ ಕ್ರಮ ಜರುಗಿಸಲಾಗುವುದು. ಪಕ್ಷದ ಕಾರ್ಯಕರ್ತರ ಆಕ್ರೋಶ ನನಗೆ ಅರ್ಥವಾಗುತ್ತದೆ. ಅಪರಾಧಿಗಳ ಹೆಡೆಮುರಿ ಕಟ್ಟುವ ಶಕ್ತಿ ಬಿಜೆಪಿ ಸರಕಾರಕ್ಕಿದೆ ಎಂದು ಸಚಿವರು ಹೇಳಿದರು.










