ಬಣಕಲ್: ಕುವೆಂಪುನಗರ ಗ್ರಾಮಸ್ಥರಿಂದ ರಸ್ತೆಗೆ ಗಿಡ ನೆಟ್ಟು ಪ್ರತಿಭಟನೆ

308
ಬಣಕಲ್:ಗುಡ್ಡಟ್ಟಿ ರಸ್ತೆಯ ಕುವೆಂಪುನಗರ ಸಮೀಪ ರಸ್ತೆ ಹೊಂಡಗುಂಡಿಗಳಿಂದ ತುಂಬಿದ್ದು ಶೀಘ್ರ ದುರಸ್ಥಿ ಮಾಡಬೇಕು ಎಂದು ಒತ್ತಾಯಿಸಿ ಬಣಕಲ್, ಕುವೆಂಪುನಗರ ಗ್ರಾಮಸ್ಥರು ರಸ್ತೆಗೆ ಗಿಡ ನೆಟ್ಟು ಆಕ್ರೋಶ ವ್ಯಕ್ತ ಪಡಿಸಿದರು.
ಕುವೆಂಪುನಗರ ಗ್ರಾಮಸ್ಥ ರಿಯಾಜ್ ಮಾತನಾಡಿ ಬಣಕಲ್ ಗುಡ್ಡಟ್ಟಿ ರಸ್ತೆಯ ಕುವೆಂಪುನಗರ ಸಮೀಪ ರಸ್ತೆ ಹೊಂಡಗುಂಡಿಗಳಿಂದ ತುಂಬಿದ್ದು ಸೇತುವೆಗೆ ತಡೆಗೋಡೆ ಕೂಡ ಇಲ್ಲ. ದಿನನಿತ್ಯ ಈ ಮಾರ್ಗವಾಗಿ ನೂರಾರು ವಾಹನಗಳು ಸಂಚರಿಸುತ್ತವೆ. ಪಾದಚಾರಿಗಳು ಹೊಂಡಗುಂಡಿಗಳ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ರಸ್ತೆ ದುರಸ್ಥಿಗೆ ಮುಂದಾಗಬೇಕು ಎಂರು.
ಗ್ರಾಮಸ್ಥ ರಮೇಶ್ ಮಾತನಾಡಿ ಹಲವು ವರ್ಷಗಳಿಂದ ಈ ಬಗ್ಗೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಳೆಗಾಲದಲ್ಲಿ ರಸ್ತೆಯ ಹೊಂಡಗುಂಡಿಯಲ್ಲಿ ಮಳೆನೀರ ತುಂಬಿಕೊಳ್ಳುವುದರಿಂದ ಈ ರಸ್ತೆಯಲ್ಲಿ ಸಂಚರಿಸುವುದೇ ದುಸ್ಥರವಾಗಿದೆ ಎಂದರು.
ಗ್ರಾಮಸ್ಥ ಅರುಣ್ ಪೂಜಾರಿ ಮಾತನಾಡಿ ರಸ್ತೆ ದುರಸ್ಥಿಗೆ ಮುಂದಾಗದೇ ಇರುವುದರಿಂದ  ರಸ್ತೆಗೆ ಗಿಡ ನೆಟ್ಟು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದೇವೆ. ಮುಂದಿನ ದಿನಗಳಲ್ಲಿ ರಸ್ತೆ ದುರಸ್ಥಿ ಮಾಡದೆ ಇದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಲೋಕೇಶ್, ಸಿದ್ದೀಕ್, ಉಲ್ಲಾಸ್, ಜಾವೀದ್, ಪೃಥ್ವಿ, ಅಲ್ಪಾಸ್,  ಸದಾಶಿವ, ಸಂತೋಷ್ ದೇವಾಡಿಗ ಮುಂತಾದವರು ಇದ್ದರು.