- ರಾಘವೇಂದ್ರ ಕೆಸವಳಲು.
ಬಿಡುವಿಲ್ಲದ ದಿನಚರಿಯ ಮುಕ್ತಾಯದೊಂದಿಗೆ ರಿಲಾಕ್ಸೇಶನ್ ಗೆಂದು T.V ಮುಂದೆ ಕುಳಿತವನಿಗೆ ಅದರಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮಗಳು ಮತ್ತಷ್ಟು ಕಿರಿಕಿರಿವುಂಟುಮಾಡಿದವು. ಮನಸ್ಸು ತಟ್ಟನೆ 90ರ ದಶಕದ ಕದ ತಟ್ಟಿತು. ಆಗಿನ್ನೂ T.V ನಮ್ಮೂರಿನ ಒಂದೆರಡು ಮನೆಗಳಿಗೆ ಅಡಿ ಇಟ್ಟಿತ್ತಷ್ಟೇ. ಆದರೆ ಈಗಿನಂತೆ ದಿನದ 24 ಗಂಟೆಯೂ ಬಾಯಿ ಬಡಿದುಕೊಳ್ಳದೆ ಕೆಲವೇ ಕೆಲವು ಕಾರ್ಯಕ್ರಮಗಳನ್ನು ತನ್ನೊಳಗಿನ ಅತ್ಯಮೂಲ್ಯ ಸಂಗ್ರಹ ಎಂಬಂತೆ ಬಿತ್ತರಿಸಿ ನಂತರ ಬೆಚ್ಚಗಿನ ಮೇಲು ಹೊದಿಕೆಯೊಂದಿಗೆ ಮೌನವಾಗಿರುತ್ತಿತ್ತು. ನಮ್ಮ ಮನೆಗೆ T.V ಆಗಮನವಾದಾಗ ನಾನಿನ್ನೂ….ತರಗತಿಯಲ್ಲಿ ಓದುತ್ತಿದ್ದೆ. ಮೊದಲ ಬಾರಿಗೆ T.V ನಮ್ಮ ಮನೆಯ ಮೇಜನ್ನು ಅಲಂಕರಿಸಿದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲಾ. ಪ್ರಪಂಚದ ಎಲ್ಲಾ ಸಂಪತ್ತು ನನಗೊಬ್ಬನಿಗೇ ದೊರಕಿದ ಆನಂದ. ಆ ಮುಗ್ಧ ಸಂತಸದ ಘಳಿಗೆ ಮತ್ತೆಂದೂ ಬಾರದ ನೆನಪು.

ಆಗೆಲ್ಲಾ ಭಾನುವಾರ ಬಂತೆಂದರೆ ಬೆಳಿಗ್ಗೆಯೇ ಎದ್ದು ಅಕ್ಕಂದಿರೊಂದಿಗೆ T.V ಮುಂದೆ ಪ್ರಸಾರವಾಗುತ್ತಿದ್ದ ರಂಗೋಲಿ, ಚಂದ್ರಕಾಂತ ಧಾರಾವಾಹಿಯನ್ನು ನೋಡಲು ತುಂಬಾ ಸಡಗರದಿಂದ ಕೂರುತ್ತಿದ್ದೆ. ಬೇರೆ ವಿಚಾರದಲ್ಲಿ ನನ್ನದೇ ಮೇಲುಗೈ ಸಾಧಿಸಲು ಅವರೊಂದಿಗೆ ಕಿತ್ತಾಡುತ್ತಿದ್ದ ನಾನು T.V ಯ ಮುಂದೆ ಅವರೊಂದಿಗೆ ವಿನಮ್ರ ಮಗು. ಈಗಿನಂತೆ ರಿಮೋಟ್ಗಾಗಿ ಕಿತ್ತಾಟವಿಲ್ಲ ಎಲ್ಲರೂ ಸಹಮತದಿಂದ ಪ್ರಸಾರವಾಗುತ್ತಿದ್ದ ಧಾರಾವಾಹಿಯನ್ನು ಕಣ್ಣು ಮಿಟುಕಿಸದೆ ನೋಡುತ್ತಿದ್ದೆವು. ಮಧ್ಯಾಹ್ನದ ನಂತರ ವಾರಕ್ಕೊಮ್ಮೆ ಪ್ರಸಾರಗೊಳ್ಳುತ್ತಿದ್ದ ಕನ್ನಡ ಚಲನಚಿತ್ರ ನೋಡಲು ಮನೆಮಂದಿಯೆಲ್ಲಾ ಸಡಗರದಿಂದ ಹಾಲ್ನಲ್ಲಿ ಸೇರುತ್ತಿದ್ದೆವು. ಈಗ ರೂಮಿಗೊಂದರಂತೆ T.V ಮನೆಗಳಲ್ಲಿ ಇರುವುದರಿಂದ ಆಗಿನ ಸಡಗರವಾಗಲಿ ಆ ಮೂಲಕ ಬೆಸೆದುಕೊಳ್ಳುತ್ತಿದ್ದ ಆಪ್ತತೆಯೂಗಲಿ ನಮ್ಮ ನಡುವೆ ಇಲ್ಲ. ನಿಜಕ್ಕೂ ಬೇಡವೆನಿಸಿತು.
ಪ್ರತಿ ಬುಧವಾರ ಪ್ರಸಾರವಾಗುತ್ತಿದ್ದ ಹಿಂದಿ ಚಲನಚಿತ್ರ ಗೀತೆಗಳ ಚಿತ್ರಹಾರ್, ಶುಕ್ರವಾರದಂದು ಬರುತ್ತಿದ್ದ ಕನ್ನಡ ಗೀತೆಗಳ ಚಿತ್ರಮಂಜರಿ ನನ್ನನ್ನು ರಂಜಿಸಿ ಕಾಡಿದಷ್ಟು ಈಗಿನ ಯಾವ ಕಾರ್ಯಕ್ರಮಗಳೂ ಕಾಡಿಲ್ಲ.
ಮನೆಯೊಳಗಿನ ಮನಗಳನ್ನು ಒಂದು ಕಡೆ ಹಿಡಿದಿಟ್ಟು ಮುದಗೊಳಿಸುತ್ತಿದ್ದ ಆಗಿನ ಕಪ್ಪು ಸುಂದರಿ ಈಗಿಲ್ಲ. ಥಿಯೇಟರ್ನ ಪರದೆಯಂತಹ T.V ಗಳು ಇಂದು ಮನೆ ಮನೆಗಳ ಗೋಡೆಯ ಮೇಲೆ ಅಡ್ವಾನ್ಸ್ಡ್ ಫೀಚರ್ಗಳೊಂದಿಗೆ ರಾರಾಜಿಸುತ್ತಿದೆ. ಆದರೆ 90ರ ದಶಕದಲ್ಲಿ ನಮ್ಮನ್ನೆಲ್ಲಾ ಒಂದೇ ಹಾಲಿನಲ್ಲಿ ಕೂರಿಸಿ ಪರಸ್ಪರರು ಸಂವಹಿಸುವಂತೆ ಮಾಡುತ್ತಿದ್ದ T.V ಯ ಇಂದಿನ ಬದಲಾದ ಸ್ವರೂಪ ಬಹುಪಾಲು ಕೀಳು ಅಭಿರುಚಿಯ ಧಾರಾವಾಹಿಗಳು, ಹುರುಳೇ ಇಲ್ಲದ ನ್ಯೂಸ್ಗಳು ಇವುಗಳಿಗಷ್ಟೇ ಮೀಸಲು. ಇನ್ನು ಮನೆಮಂದಿಯೂ ಕೂಡಾ ತಮ್ಮ ರೂಮಿನಲ್ಲಿ ಕದವಿಕ್ಕಿ ಪ್ರೈವಸಿಯ ಹೆಸರಿನಲ್ಲಿ ಮೂಕರಂತೆ ಯಾವುದೋ ಒಂದು ಕಾರ್ಯಕ್ರಮ ನೋಡುತ್ತಾ ಕುಳಿತು ಬಿಡುತ್ತಾರೆ.
ಆಗ ಹಿತ ಮಿತವಾಗಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮಗಳು ಈಗ ವಾಕರಿಕೆ ಬರಿಸುವ ಮಟ್ಟಕ್ಕೆ ರಾತ್ರಿ ಹಗಲೆನ್ನದೆ ಪ್ರಸಾರವಾಗುತ್ತಿವೆ. ಇಂತಹ ಬದಲಾದ ಸ್ಥಿತಿಯಲ್ಲಿ 90ರ ಸುಂದರ ನೆನಪುಗಳು ನನ್ನನ್ನು ಆಗಾಗ ಕಾಡುವುದಂತೂ ಸತ್ಯ.










