ಮೂಡಿಗೆರೆ :ಸುರಕ್ಷಿತಾ ಕ್ರಮ ಕೈಗೊಳ್ಳದ ಪ್ರವಾಸಿಗರು… ಸ್ಥಳೀಯರಿಗೆ ಕರೊನಾ ಹರಡುವ ಬೀತಿ!

434

ಬಣಕಲ್:ಸದಾ ಪ್ರವಾಸಿಗರಿಂದ ತುಂಬಿ ತುಳುಕುವ ಕೊಟ್ಟಿಗೆಹಾರದಲ್ಲಿ ಪರವಾಸಿಗರು ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಸುರಕ್ಷತಾ ಕ್ರಮ ಅನುಸರಿಸದೇ ಇರುವುದರಿಂದ ಸಂಬಂದಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಧರ್ಮಸ್ಥಳ, ಹೊರನಾಡು, ಶೃಂಗೇರಿ, ಸುಬ್ರಮಣ್ಯ ಸೇರಿದಂತೆ ಹಲವಾರು ಪ್ರವಾಸಿ ತಾಣಗಳ ಸಂಪರ್ಕ ಕೇಂದ್ರವಾದ ಕೊಟ್ಟಿಗೆಹಾರ ಸದಾ ಪ್ರವಾಸಿಗರಿಂದ ತುಂಬಿರುತ್ತದೆ. ವಾರಾಂತ್ಯ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಚಾರ್ಮಾಡಿ ಘಾಟ್, ದೇವರಮನೆಯಂತಹ ಪ್ರವಾಸಿ ತಣಗಳಿಗೆ ಬರುವ ಪ್ರವಾಸಿಗರು ಕೊಟ್ಟಿಗೆಹಾರಕ್ಕೆ ಬರುತ್ತಾರೆ. ಆದರೆ ಕೊಟ್ಟಿಗೆಹಾರಕ್ಕೆ ಬರುವ ಬಹುತೇಕ ಪ್ರವಾಸಿಗರು ಮಾಸ್ಕ್ ಧರಿಸುತ್ತಿಲ್ಲ. ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಇದರಿಂದ ಸ್ಥಳೀಯರಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ರಾಜ್ಯದ ವಿವಿದೆಡೆಯಿಂದ ಪ್ರವಾಸಿಗರು ಆಗಮಿಸುವುದರಿಂದ ಮಾಸ್ಕ್ ಹಾಕದ ಪ್ರವಾಸಿಗರಿಗೆ ಅಧಿಕಾರಿಗಳು ದಂಡ ವಿಧಿಸಬೇಕು. ಪ್ರವಾಸಿಗರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಬರುವಂತೆ ಅಂಗಡಿ ಮುಂಗಟ್ಟುಗಳ ಮುಂಭಾಗ ವರ್ತಕರು ಸೂಚನಾಫಲಕ ಅಳವಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಬಣಕಲ್ ಪಿಎಸ್‍ಐ ಶ್ರೀನಾಥ್ ರೆಡ್ಡಿ, ಚಾರ್ಮಾಡಿ ಘಾಟ್, ದೇವರಮನೆ, ಕೊಟ್ಟಿಗೆಹಾರದಲ್ಲಿ ಪೋಲಿಸರನ್ನು ನಿಯೋಜಿಸಲಾಗಿದೆ. ಕೆಲ ಕಡೆಗಳಲ್ಲಿ ಮಾಸ್ಕ್ ಹಾಕದಿರುವವರಿಗೆ ದಂಡವನ್ನು ಹಾಕಲಾಗುತ್ತಿದೆ. ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಪ್ರವಾಸಿಗರು ಸ್ವಯಂಪ್ರೇರಿತರಾಗಿ ಮುಂದಾಗಬೇಕು. ಈ ಬಗ್ಗೆ ಅಂಗಡಿ ಹೋಟೆಲ್‍ಗಳ ವರ್ತಕರು ಪ್ರವಾಸಿ ಗ್ರಾಹಕರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದ್ದಾರೆ.