ಮೂಡಿಗೆರೆ : ತಾಲ್ಲೂಕಿನ ಕೂವೆ, ಬಣಕಲ್, ಕೆಳಗೂರು ಚರ್ಚ್ನಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಕ್ರಿಸ್ಮಸ್ ಹಬ್ಬದ ವಿಶೇಷ ಪೂಜೆಯಲ್ಲಿ ಭಾಗವಹಿಸಿದ ಉಜಿರೆಯ ದಯಾಳ್ಭಾಗ್ನ ಧರ್ಮಗುರು ಜ್ಯೋ ಪ್ರಾನ್ಸಿಸ್ ಮಾತನಾಡಿ, ಕ್ರಿಸ್ಮಸ್ ಹಬ್ಬ ಕ್ಷಮೆ, ಶಾಂತಿ, ನೆಮ್ಮದಿಯ ದ್ಯೋತಕದ ಹಬ್ಬವಾಗಬೇಕು. ಪರಸ್ಪರ ಅನ್ಯೋನ್ಯತೆಯ ಹಬ್ಬವಾಗಬೇಕು. ಮಾನವತಾವಾದಿಯಾಗಿ ಜಗತ್ತಿಗೆ ಬಂದ ಏಸು ಕ್ರಿಸ್ತರು ಸರ್ವ ಜನಾಂಗಕ್ಕೆ ಶಾಂತಿಯ ಸಂಕೇತವಾಗಿ ಬಂದರು. ಸಮಾಜದಲ್ಲಿ ಜೀವಿಸುವಾಗ ನಾವು ಏಸುವಿನ ಆದರ್ಶ ಪಾಲಿಸಬೇಕು. ಪರರಿಗೂ ಬೆಳಕು ನೀಡುವ ಹಬ್ಬವಾಗಿ ಆಚರಿಸಬೇಕು. ಇಲ್ಲದಿದ್ದವರಿಗೆ ನೀಡುವ ಕೈಗಳು ನಿಮ್ಮದಾಗಬೇಕು. ನಮಗೆ ಜೀವನದಲ್ಲಿ ಪ್ರೀತಿ, ಶಾಂತಿ, ಸಂತೋಷ ದೊರೆಯಬೇಕಾದರೆ ನಾವು ಇತರರಿಗೆ ನೆರಳಾಗಿ ಬದುಕಬೇಕು. ಸ್ವಾರ್ಥತೆ ಬದಿಗೊತ್ತಿ ನಿಸ್ವಾರ್ಥ ಬಾಳು ಬದುಕಬೇಕು ಎಂದರು. ಈ ಸಂದರ್ಭದಲ್ಲಿ ಧರ್ಮಗುರು ಆಲ್ಬರ್ಟ್ ಡಿಸಿಲ್ವ, ಅಂತೋನಿ ಡಿಸೋಜ ಇದ್ದರು.
ಕೆಳಗೂರು ಚರ್ಚ್ನಲ್ಲಿ ಧರ್ಮಗುರು ಜಾರ್ಜ್ ಅಂದ್ರಾದೆ ಮಾತನಾಡಿ, ಕ್ರಿಸ್ಮಸ್ ಹಬ್ಬ ಆಚರಣೆಯು ಪ್ರೀತಿಯ ಸಂಕೇತವಾಗಬೇಕು. ನೆರೆಮನೆಯ ಕಣ್ಣಿರನ್ನು ಒರೆಸುವ ಪ್ರೀತಿದಾಯಕ ಹಬ್ಬ ಆಚರಣೆ ನಮ್ಮದಾಗಬೇಕು. ಜಗದ ರಕ್ಷಣೆಗಾಗಿ ಏಸು ಕ್ರಿಸ್ತರು ತ್ಯಾಗದ ಜೀವನವನ್ನು ನಡೆಸಿದ್ದಾರೆ. ಅಂತಹ ಮಾದರಿ ಜೀವನ ನಾವು ನಮ್ಮ ಜೀವಿತ ಅವದಿಯಲ್ಲಿ ನಡೆಸಬೇಕು ಎಂದರು.
ಕೂವೆ ಚರ್ಚ್ನಲ್ಲಿ ಹಾಸನದ ಧರ್ಮಗುರು ಫೆಲಿಕ್ಸ್ ಸೆರಾವೊ ಮಾತನಾಡಿ,ಯೇಸು ಕ್ರಿಸ್ತರು ಜಗತ್ತಿನ ಬೆಳಕಾಗಿ ನಮ್ಮ ಪಾಪ ವಿಮೋಚನೆಗೆ ಜಗತ್ತಿಗೆ ಮಾನವ ಸ್ವರೂಪಿಯಾಗಿ ಬದುಕಿ ತ್ಯಾಗದ ಜೀವನ ನಡೆಸಿದ್ದಾರೆ. ಅವರಂತೆ ನಮಗೆ ತ್ಯಾಗ ಮಾಡಲು ಸಾದ್ಯವಾಗದಿದ್ದರೂ ಪರರ ಸಂಕಷ್ಟಗಳಿಗೆ ಸ್ಪಂಧಿಸಿ ಉದಾರಿತನದ ಕೊಡುಗೆ ನೀಡುವ ಮೂಲಕ ಸಂತೃಪ್ತ ನಡೆಸಬೇಕು ಎಂದರು. ಚರ್ಚಿನಲ್ಲಿ ಆಕರ್ಷಕ ಗೋದಲಿ ಸರ್ವರ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಧರ್ಮಗುರು ಸ್ಟ್ಯಾನಿ ಆರ್.ಕಾರ್ಡೋಜಾ, ಜೆ.ಬಿ.ಗೊನ್ಸಾಲ್ವಿಸ್ ಇದ್ದರು.
ಬಣಕಲ್,ಕೂವೆ,ಕೆಳಗೂರು ಚರ್ಚ್ಗಳಲ್ಲಿ ಸಂಭ್ರಮದ ಹಬ್ಬದ ವಿಶೇಷ ಪೂಜೆಗಳು ನಡೆದವು. ಪೂಜೆಯ ನಂತರ ಕೇಕ್ ಮತ್ತು ಪಾನೀಯ ವಿತರಿಸಲಾಯಿತು. ಬಣಕಲ್ ಬಾಲಿಕಾ ಮರಿಯ ಚರ್ಚ್ನಲ್ಲಿ ಜಾವಳಿ, ಬಾಳೂರು, ಕೊಟ್ಟಿಗೆಹಾರ ಸುತ್ತಮುತ್ತಲ ಪ್ರದೇಶದ ಕ್ರೈಸ್ತ ಭಕ್ತಾದಿಗಳು ಚರ್ಚ್ನಲ್ಲಿ ಭಾಗವಹಿಸಿದ್ದರು.










