ವರದಿ : ಸುಧೀರ್ ಬಿ.ಟಿ. ಮೂಡಿಗೆರೆ.
ಮೂಡಿಗೆರೆ : ಏಸು ಕ್ರಿಸ್ತನ ಜನ್ಮದಿನವಾದ ಕ್ರಿಸ್ಮಸ್ ಹಬ್ಬವನ್ನು ಕ್ರೈಸ್ತ ಸಮುದಾಯದವರು ತಾಲ್ಲೂಕಿನಾದ್ಯಂತ ಬುಧವಾರ ಸಂಭ್ರಮದಿಂದ ಆಚರಣೆ ಮಾಡಿದರು.
ಮಂಗಳವಾರದಂದು ರಾತ್ರಿ ಎಲ್ಲಾ ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆ ಆಯೋಜಿಸಲಾಗಿತ್ತು. ಕ್ರಿಸ್ಮಸ್ ಗೀತೆಗೆಳ ಗಾಯನ, ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಪ್ರಭು ಏಸುವಿನ ಕುರಿತಾದ ಕಥೆಗಳು, ಭಜನೆಗಳು ರಾರಾಜಿಸಿದವು. ಹಬ್ಬದ ವಿಶೇಷ ಬಲಿ ಪೂಜೆಯನ್ನು ಆಯಾ ಚುರ್ಚುಗಳ ಧರ್ಮಾಧ್ಯಕ್ಷರುಗಳು ನಡೆಸಿ ಹಬ್ಬದ ಸಂದೇಶಗಳನ್ನು ನೀಡಿದರು. ಹಬ್ಬದ ಪ್ರಯುಕ್ತ ತಾಲ್ಲೂಕಿನ ವಿವಿಧ ಭಾಗಗಳಲ್ಲಿನ ಚರ್ಚುಗಳು ವಿದ್ಯುತ್ ದೀಪಗಳು ಹಾಗೂ ಚಿತ್ತಾಕರ್ಷಕ ನಕ್ಷತ್ರಗಳಿಂದ ಅಲಂಕೃತಗೊಂಡಿದ್ದವು.
ಚರ್ಚುಗಳಲ್ಲಿ ಸಂಜೆ ಏಳು ಗಂಟೆಗೆ ಆರಂಭವಾದ ಪ್ರಾರ್ಥನೆಗಳು ಮಧ್ಯ ರಾತ್ರಿ 12 ಗಂಟೆಯವರೆಗೆ ನಡೆದವು. ಮಧ್ಯರಾತ್ರಿ ಏಸುವಿನ ಜನನವಾದ ಸಂದೇಶವನ್ನು ಸಾರಿದ ನಂತರ ಮೊದಲೇ ಸಿಂಗರಿಸಲ್ಪಟ್ಟ ಗೋದಲಿಯಲ್ಲಿ ಬಾಲ ಏಸುವಿನ ಮೂರ್ತಿಯನ್ನು ಇಟ್ಟು ದೇವರ ಸ್ತುತಿ, ಜೋಗುಳದ ಮೂಲಕ ಮೆಚ್ಚಿನ ದೇವನನ್ನು ಆರಾಧಿಸಲಾಯಿತು. ಮೇಣದ ಬತ್ತಿಗಳನ್ನು ಬೆಳಗಿ, ಹೂವು ಸುಗಂಧಗಳನ್ನು ಅರ್ಪಿಸುವ ಮೂಲಕ ಯೇಸು ಕ್ರಿಸ್ತನ ಜನನವನ್ನು ಸ್ವಾಗತಿಸಲಾಯಿತು. ತಾಲ್ಲೂಕಿನ ಪ್ರಮುಖ ದೇವಾಲಯಗಳು ಭಕ್ತಾದಿಗಳಿಂದ ತುಂಬಿ ತುಳುಕುತ್ತಿದ್ದವು.
ಹಬ್ಬದ ಪ್ರಯುಕ್ತ ಚರ್ಚ್ಗಳಲ್ಲಿ ಯುವ ಸಂಘಟಕರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ, ಮಕ್ಕಳ ಮೆಚ್ಚಿನ ಸಾಂತಾ ಕ್ಲಾಸ್ ವೇಷ, ಭಕ್ತಾದಿಗಳಿಗೆ ವಿಶೇಷವಾಗಿ ತಯಾರಿಸಿದ ಕೇಕ್ ವಿತರಣೆ ಕೂಡ ನಡೆಯಿತು. ಬಲಿ ಪೂಜೆ ಪ್ರಾರ್ಥನೆಗಳ ನಂತರ ಭಕ್ತಾದಿಗಳು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಒಂದು ವಾರದಿಂದ “ಎಂಥಹ ಮಗುವನ್ನು ಹೆತ್ತೆಯಮ್ಮ.. ಲೋಕಕ್ಕೆ ಸಂತಸ ನೀಡುವ ಬಾಲ ಏಸುವನ್ನು ಹೆತ್ತೆಯಮ್ಮ” ಎಂಬ ಜಾನಪದ ಶೈಲಿಯ ಗೀತೆಯನ್ನು ಪ್ರಸ್ತುತಪಡಿಸುತ್ತ ಸಾಂತಾ ಕ್ಲಾಸ್ ವೇಷಧಾರಿಗಳು ಮನೆ ಮನೆಗೆ ತೆರಳಿ ಹಬ್ಬದ ಸಿಹಿ ತಿನಿಸಿನ ಜೊತೆಗೆ ಶುಭಾಶಯಗಳನ್ನು ತಿಳಿಸುವ ದೃಶ್ಯ ಕಂಡು ಬಂತು.
ಡಿಸೆಂಬರ್ ಮೊದಲ ವಾರದಿಂದಲೇ ಹಬ್ಬದ ಖರೀದಿಯ ಭರಾಟೆ ಜೋರಾಗಿತ್ತು. ಪಟ್ಟಣದ ಕೆಲವು ಅಂಗಡಿಗಳಲ್ಲಿ ವಿವಿಧ ಗಾತ್ರದ ಕ್ರಿಸ್ಮಸ್ ಟ್ರೀ, ಬೇರೆ ಬೇರೆ ವಿನ್ಯಾಸದ ನಕ್ಷತ್ರಗಳು, ಶುಭ ಸಂಕೇತದ ಗಂಟೆಗಳು, ರಿಬ್ಬನ್, ಬಣ್ಣದ ಕ್ಯಾಲೆಂಡರ್, ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಮಾರಾಟಕ್ಕೆ ಇಡಲಾಗಿತ್ತು. ದೂರದ ಊರುಗಳು ಹಾಗೂ ವಿದೇಶಗಳಲ್ಲಿ ನೆಲೆ ಕಂಡುಕೊಂಡಿರುವ ಮಕ್ಕಳು ಬಂಧು ಬಾಂಧವರ ಆಗಮನ ಹಬ್ಬಕ್ಕೆ ಇಮ್ಮಡಿ ಸಂತಸ ತಂದುಕೊಟ್ಟಿತ್ತು. ಒಂದು ವಾರದಿಂದ ಬಹುತೇಕ ಮನೆಗಳಲ್ಲಿ ಸಿಹಿತಿನಿಸುಗಳ ತಯಾರಿಕೆಗೆ ಅಣಿ ಮಾಡಿಕೊಳ್ಳಲಾಗಿತ್ತು. ಜನವರಿ ಮೊದಲನೇ ವಾರದವರೆಗೂ ಕ್ರಿಸ್ಮಸ್ ಹಬ್ಬ ಆಚರಣೆ ಚಾಲ್ತಿಯಲ್ಲಿ ಇರುತ್ತದೆ.
ಕೇಕ್ಗಳಿಗೆ ಭಾರೀ ಬೇಡಿಕೆ : ಎಷ್ಟೇ ಬಡವನಾದರೂ ಮಾತ್ರ ಯಾವ ಕ್ರೈಸ್ತನೂ ಕೂಡ ಕ್ರಿಸ್ ಮಸ್ ಹಬ್ಬದ ಆಚರಣೆಯಲ್ಲಿ ಹಿಂದೆ ಬೀಳುವುದಿಲ್ಲ. ಹೊಸ ಬಟ್ಟೆ ತೊಟ್ಟು ಕೇಕ್ ತಿಂದು ಸಂಭ್ರಮ ಪಡುವ ರೀತಿಯೇ ವಿಶೇಷವಾಗಿರುತ್ತದೆ. ಇದೇ ಕಾರಣಕ್ಕೆ ಕ್ರಿಸ್ ಮಸ್ ಹಬ್ಬವನ್ನು ಕೇಕ್ ಹಬ್ಬ ಎಂತಲೂ ಕರೆಯುವ ರೂಢಿಯಲ್ಲಿದೆ. ಈ ಹಬ್ಬದಲ್ಲಿ ಕೇಕ್ಗಳಿಗೆ ವಿಶೇಷ ಮಹತ್ವ ಇರುವುದರಿಂದ ಹಬ್ಬದ ಪ್ರಯುಕ್ತ ತಮ್ಮ ಸ್ನೇಹಿತರಿಗೆ, ಬಂಧುಗಳಿಗೆ, ನೆರೆಹೊರೆಯವರಿಗೆ ಕೇಕ್ ಹಂಚಿ ಶುಭಾಶಯ ಕೋರುತ್ತಾರೆ. ಈ ಬಾರಿ ಕೇಕ್ ಬೆಲೆ ಸ್ವಲ್ಪ ದುಬಾರಿಯಾಗಿದ್ದು, ಕಳೆದ ಬಾರಿ 100-300 ರೂ ಆಸುಪಾಸಿನಲ್ಲಿದ್ದ ಕೇಕ್ ಗಳು ಈ ಬಾರಿ 500 ರೂ ದಾಟಿರುವುದು ಹಬ್ಬದ ಆಚರಣೆಗೆ ಸ್ವಲ್ಪ ಹಿನ್ನಡೆ ಉಂಟಾಗಿದ್ದಂತೂ ಸತ್ಯ.
ಭೂರೀ ಭೋಜನ : ಕ್ರಿಶ್ಚಿಯನ್ನರ ಮನೆಗಳಲ್ಲಿ ಭರ್ಜರಿ ಹಬ್ಬದೂಟಕ್ಕೆ ಸಕಲ ಸಿದ್ಧತೆ ನಡೆದಿತ್ತು. ರೆಡ್ ವೈನ್ ಜೊತೆಗೆ ವಿವಿಧ ಬಗೆಯ ಮಟನ್ ಹಾಗೂ ಚಿಕನ್ ಬಿರಿಯಾನಿ, ಕಬಾಬ್, ತಲೆ ಮಾಂಸ, ಮಟನ್ ಚಾಪ್ಸ್, ಚಿಕನ್ ಪೆಪ್ಪರ್ ಡ್ರೈ ಸೇರಿದಂತೆ ವಿವಿಧ ಖಾದ್ಯಗಳ ತಯಾರಿ ಜೋರಾಗಿತ್ತು.










