ಬಾಣಂತಿಯರ ಸರಣಿ ಸಾವು: ನ್ಯಾಯಾಂಗ ತನಿಖೆಗೆ ವಿಪಕ್ಷಗಳ ಆಗ್ರಹ

27

ಬೆಳಗಾವಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಬಾಣಂತಿಯರ ಸಾವು ಪ್ರಕರಣ ಹೆಚ್ಚಳವಾಗುತ್ತಿರುವ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಬುಧವಾರ ತಿಳಿಸಿದರು. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆದಿರುವ ಬಾಣಂತಿಯರ ಸಾವಿನ ಬಗ್ಗೆ ನಿಯಮ 69 ರಡಿಯಲ್ಲಿ ನಡೆದ ಚರ್ಚೆಯಲ್ಲಿ ಮೊದಲಿಗೆ ಮಾತನಾಡಿದ ಆರ್.ಅಶೋಕ್ ಅವರು, ಇಡೀ ರಾಜ್ಯವನ್ನೆ ಅಚ್ಚರಿಗೊಳಿಸುವ ಘಟನೆ ಇದಾಗಿದೆ. ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವಾಗಿದೆ. ಇದರ ಜತೆಗೆ ಚಿತ್ರದುರ್ಗ, ರಾಯಚೂರು, ಬೆಳಗಾವಿ, ಪಾವಗಡ ಹಲವೆಡೆ ಬಾಣಂತಿಯರು ಸಾವನ್ನಪ್ಪಿದ್ದಾರೆ. ಇದಕ್ಕೆ ಆರೋಗ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ. ಆರೋಗ್ಯ ಇಲಾಖೆ ರೋಗಪೀಡಿತವಾಗಿದೆ. ಸರಿಯಾದ ಔಷಧಿಗಳಿಲ್ಲ. ಅವಧಿ ಮೀರಿದ ಔಷಧಿಗಳನ್ನು ನೀಡಲಾಗುತ್ತಿದೆ. ಇಲಾಖೆಯ ನಿರ್ಲಕ್ಷ್ಯಕ್ಕೆ ಬಾಣಂತಿಯರು ಬಲಿಯಾಗಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಬಾಣಂತಿಯರ ಸಾವಿನ ಬಗ್ಗೆ ಹಾಲಿ ಹೈಕೋರ್ಟ್‍ನ ನ್ಯಾಯಾಧೀಶರ ಸುಪರ್ದಿಯಲ್ಲಿ ನ್ಯಾಯಾಂಗ ತನಿಖೆಯಾಗಲಿ. ಸತ್ಯ ಜನರಿಗೆ ಗೊತ್ತಾಗಬೇಕಿದೆ ಎಂದು ಹೇಳಿದರು.