ರಾಜಸ್ಥಾನ: ಪೈಲಟ್ ಆಗಬೇಕು ಎಂಬ ಕನಸು ಕಂಡಿದ್ದ ಯುವತಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸಾವಿನ ಬಳಿಕ ಅವರು ಐದು ಜನರ ಬಾಳಿಗೆ ಬೆಳಕಾಗಿದ್ದಾರೆ. ಮೂಲತಃ ಪೋಖ್ರಾನ್‌ನ ಖೆಟೋಲೈ ಮೂಲದ 21 ವರ್ಷದ ಚೇತನಾ ಬಿಷ್ಣೋಯ್ ಮಹಾರಾಷ್ಟ್ರದ ರೆಡ್‍ಬರ್ಡ್‍ನಲ್ಲಿ ಪೈಲಟ್ ತರಬೇತಿ ಪಡೆಯುತ್ತಿದ್ದರು. ಡಿಸೆಂಬರ್ 9ರಂದು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಅವರ ಬ್ರೈನ್ ಡೆಡ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಗಳನ್ನು ಕಳೆದುಕೊಂಡ ನೋವಿನಲ್ಲಿದ್ದ ಕುಟುಂಬದವರು ಮಗಳನ್ನು ಇನ್ನೊಂದು ಜೀವದಲ್ಲಿ ಕಾಣುವ ದೃಢ ನಿರ್ಧಾರಕ್ಕೆ ಬಂದು, ಈ ತೀರ್ಮಾನದ ಬೆನ್ನಲ್ಲೇ ಅಂಗಾಂಗ ದಾನಕ್ಕೆ ಮುಂದಾದರು. ಅವರ ಈ ನಿರ್ಧಾರದಿಂದ ಐದು ಜನ ಹೊಸ ಜನ್ಮ ಪಡೆದಿದ್ದಾರೆ. ಅಂಗಾಂಗ ದಾನ ಪ್ರಕ್ರಿಯೆ ಬಳಿಕ ಬಿಷ್ಣೋಯಿ ಅಂತ್ಯಕ್ರಿಯೆಯನ್ನು ಬುಧವಾರ ಸ್ವಗ್ರಾಮದಲ್ಲಿ ಕುಟುಂಬಸ್ಥರು ನೆರವೇರಿಸಿದ್ದಾರೆ. ಚೇತನಾಳ ಹೃದಯ, ಲಿವರ್, ಎರಡೂ ಕಿಡ್ನಿ ಮತ್ತು ಮೇದೋಜೀರಕ ಗ್ರಂಥಿಯನ್ನು ಅಂಗಾಂಗ ದಾನ ಮಾಡಲು ಕುಟುಂಬ ಒಪ್ಪಿಗೆ ನೀಡಿದೆ. ಚೇತನ ಅಂಗಾಂಗ ಪಡೆದ ಕುಟುಂಬವೂ ಪುಣೆಯ ರೂಬಿ ಹಾಲ್ ಕ್ಲಿನಿಕ್‍ನಲ್ಲಿ ಚೇತನಾ ಅವರ ಕುಟುಂಬಕ್ಕೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.










