ಬಾಲಕಿ ಹೇಳಿದ ಸುಳ್ಳಿಗೆ ಧರ್ಮದೇಟು ತಿಂದ ಡೆಲಿವರಿ ಬಾಯ್.

68
firstsuddi

ಬೆಂಗಳೂರು: ಬಾಲಕಿಯ ಸುಳ್ಳು ಹೇಳಿಕೆಯಿಂದ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಯುವಕನನ್ನು ಅಪಾರ್ಟ್‍ಮೆಂಟ್ ನಿವಾಸಿಗಳು ಥಳಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಜೂ.12ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಎಲೆಕ್ಟ್ರಾನಿಕ್ ಸಿಟಿಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಅಪಾರ್ಟ್‍ಮೆಂಟ್‍ವೊಂದರಲ್ಲಿ ಬಾಲಕಿಯ ಪೋಷಕರು ವಾಸವಾಗಿದ್ದರು. ದಂಪತಿಗೆ ಐದು ವರ್ಷದ ಗಂಡು ಹಾಗೂ ಅಪ್ರಾಪ್ತ ಮಗಳಿದ್ದಾಳೆ. ಜೂ.12ರಂದು ಬೆಳಗ್ಗೆ ಮಗನನ್ನು ಶಾಲೆಗೆ ಸೇರಿಸಲು ಪೋಷಕರು ಮಗಳನ್ನು ಮನೆಯಲ್ಲಿಯೇ ಬಿಟ್ಟು ತೆರಳಿದ್ದರು. ಮಗಳಿಗೆ ಆನ್‍ಲೈನ್ ಕ್ಲಾಸ್ ಇದ್ದಿದ್ದರಿಂದ ಕೆಲ ಹೊತ್ತಿನ ಬಳಿಕ ದಂಪತಿ ಮನೆಗೆ ಬಂದರು.

ಆದರೆ ಮಗಳು ಕಾಣದಿರುವುದು ಪೋಷಕರ ಗಮನಕ್ಕೆ ಬಂದಿದೆ. ಇದರಿಂದ ಕಂಗಾಲಾದ ಪೋಷಕರು ಮಗಳಿಗಾಗಿ ಹುಡುಕಾಟ ನಡೆಸಿದ್ದರು. ಬಳಿಕ ಅಪಾರ್ಟ್‍ಮೆಂಟ್ ಟೆರಸ್ ಮೇಲೆ ಸಿಕ್ಕಿದ್ದ ಬಾಲಕಿಗೆ, ಇಷ್ಟು ಹೊತ್ತು ಎಲ್ಲಿದ್ದೆ ಎಂದು ಕೇಳಿದಾಗ, ಫುಡ್ ಡೆಲಿವರಿ ಬಾಯ್‍ವೊಬ್ಬ ಮನೆಗೆ ಬಂದಿದ್ದ, ಬಲವಂತವಾಗಿ ಕೈ ಹಿಡಿದು ಟೆರಸ್‍ಗೆ ಕರೆತಂದ ಎಂದು ಹೇಳಿದ್ದಳು.

ಈ ವೇಳೆ ಯಾರು ಕಿಡ್ನ್ಯಾಪ್ ಮಾಡಿದ್ದರು ಎಂದು ಪೋಷಕರು ಪ್ರಶ್ನೆ ಕೇಳಿದ್ದು, ಅಪಾರ್ಟ್‍ಮೆಂಟ್ ಮುಂಭಾಗದಲ್ಲಿ ತೆರಳುತ್ತಿದ್ದ ಡೆಲಿವರಿ ಬಾಯ್​ನ್ನು ತೋರಿಸಿದ್ದಳು. ಆಗ ಅಪಾರ್ಟ್‍ಮೆಂಟ್ ನಿವಾಸಿಗಳೆಲ್ಲಾ ಸೇರಿಕೊಂಡು ಡೆಲಿವರಿ ಬಾಯ್‍ಗೆ ಮನಬಂದಂತೆ ಥಳಿಸಿದ್ದಾರೆ. ಕೂಡಲೇ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಮಾಹಿತಿ ನೀಡಿ ಕರೆಸಿಕೊಂಡಿದ್ದಾರೆ.

ಇನ್ನು ಸ್ಥಳಕ್ಕೆ ಧಾವಿಸಿದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆತ ವಿಚಾರಣೆಯಲ್ಲಿ ತಪ್ಪೊಪ್ಪಿಕೊಳ್ಳದ ಕಾರಣ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಲು ಮುಂದಾಗಿದ್ದಾರೆ. ಆದರೆ ಟೆರಸ್ ಮೇಲೆ ಯಾವುದೇ ಸಿಸಿಟಿವಿ ಇರಲಿಲ್ಲ. ನಂತರ ಪಕ್ಕದ ಬಿಲ್ಡಿಂಗ್ ನಿಂದ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಬಾಲಕಿ ಸುಳ್ಳು ಹೇಳಿರುವುದು ಬೆಳಕಿಗೆ ಬಂದಿದೆ.

ಬಳಿಕ ಪೊಲೀಸರು ನಡೆದ ಸತ್ಯದ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಮಗಳನ್ನು ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಸತ್ಯ ಒಪ್ಪಿಕೊಂಡಿದ್ದಾಳೆ. ಆಟ ಆಡೋಕೆ ಹೋಗಿದ್ದೇನೆ ಅಂದರೆ ಬೈಯುತ್ತಾರೆ, ಅದಕ್ಕೊಸ್ಕರ ಕಿಡ್ನ್ಯಾಪ್ ಕಥೆ ಕಟ್ಟಿದೆ ಎಂದು ಪೊಲೀಸರ ಮುಂದೆ ಬಾಲಕಿ ಹೇಳಿಕೆ ನೀಡಿದ್ದಾಳೆ.

ಸದ್ಯ ಡೆಲಿವರಿ ಬಾಯ್ ಪ್ರತಿರೋಧವಾಗಿ ಯಾವುದೇ ದೂರು ನೀಡಿಲ್ಲ. ಬದಲಾಗಿ ಯಾರೇ ವ್ಯಕ್ತಿಗಳ ವಿರುದ್ಧ ಆಪಾದನೆ ಕೇಳಿ ಬಂದರೆ ಥಳಿಸುವುದನ್ನು ಬಿಟ್ಟು ಪೊಲೀಸ್ ವಿಚಾರಣೆ ನಡೆಸುವ ತನಕ ತಾಳ್ಮೆಯಿಂದ ವರ್ತಿಸಬೇಕು ಎಂದು ಪೋಷಕರಿಗೆ ಕಿವಿಮಾತು ಹೇಳಿದ್ದಾನೆ ಎಂದು ಹಿರಿಯ ಪೊಲೀಸ್ ಆಧಿಕಾರಿಗಳು ಖಚಿತಪಡಿಸಿದ್ದಾರೆ.