ಬಿರ್ಭೂಮ್ ಹತ್ಯಾಕಾಂಡ – ಸಿಬಿಐ ತನಿಖೆಗೆ ಆದೇಶಿಸಿದ ಕೋಲ್ಕತ್ತಾ ಹೈಕೋರ್ಟ್.

83
firstsuddi

ಕೋಲ್ಕತ್ತಾ : ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ರಾಮಪುರಹಟ್ ಹತ್ಯಾಕಾಂಡದ ಬಗ್ಗೆ ಸಿಬಿಐ ತನಿಖೆ ನಡೆಸಲು ಕೋಲ್ಕತ್ತಾ ಹೈಕೋರ್ಟ್ ಆದೇಶ ಹೊರಡಿಸಿದೆ.

ಕೊಲ್ಕತ್ತಾ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಆರ್ ಭಾರದ್ವಾಜ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದ್ದು, ಏಪ್ರಿಲ್ 7 ರೊಳಗೆ ತನಿಖೆಯ ಪ್ರಗತಿಯ ವರದಿಯನ್ನು ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದೆ. ಸದ್ಯ ಎಸ್ ಐಟಿ ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಇದೀಗ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಿದೆ.

ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕ ಭಾದು ಶೇಖ್ ಕಚ್ಚಾ ಬಾಂಬ್ ದಾಳಿಯಲ್ಲಿ ಹತರಾದ ನಂತರ ಪ್ರತೀಕಾರವಾಗಿ ಹಿಂಸಾಚಾರ ನಡೆದಿದೆ ಎನ್ನಲಾಗಿದೆ. ರಾಮಪುರಹಟ್ ಪಟ್ಟಣದ ಬಳಿಯ ಬೊಗ್ಟುಯಿ ಗ್ರಾಮದಲ್ಲಿ ಮಂಗಳವಾರ ಗುಂಪೊಂದು ಆರು ಮಹಿಳೆಯರು ಮತ್ತು ಇಬ್ಬರು ಮಕ್ಕಳಿಗೆ ಮೊದಲು ಹಲ್ಲೆ ಮಾಡಿ, ಬಳಿಕ ಮನೆಯೊಳಗೆ ಕೂಡಿಹಾಕಿ ಜೀವಂತವಾಗಿ ಸುಟ್ಟು ಹಾಕಿತ್ತು. ಒಂದು ದಿನದ ನಂತರ ಸುಟ್ಟ ಮೃತದೇಹಗಳು ಪತ್ತೆಯಾಗಿದ್ದು, ಎಲ್ಲರೂ ಬಹುತೇಕ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದರು.

ಎರಡು ಗುಂಪುಗಳ ನಡುವಿನ ವೈಯಕ್ತಿಕ ದ್ವೇಷವೇ ಭಾದು ಶೇಖ್ ಹತ್ಯೆಗೆ ಕಾರಣವಾಗಿರಬಹುದು. ಇದರಲ್ಲಿ ಯಾವುದೇ ರಾಜಕೀಯ ಪೈಪೋಟಿ ಇಲ್ಲ ಎಂದು ಪಶ್ಚಿಮ ಬಂಗಾಳದ ಪೊಲೀಸ್ ಮಹಾನಿರ್ದೇಶಕ ಮನೋಜ್ ಮಾಳವಿಯಾ ಹೇಳಿದ್ದರು.