ಬೆಂಗಳೂರಿನಲ್ಲಿ ಎಐ ನೂತನ ಸಿಗ್ನಲ್‍ಗಳ ಅಳವಡಿಕೆ.

24

ಬೆಂಗಳೂರು: ಸುಗಮ ಸಂಚಾರ ಹಾಗೂ ವಾಹನ ಸವಾರರ ಪ್ರಯಾಣದ ಸಮಯದಲ್ಲಿನ ತಡೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ನಗರದ 123 ಪ್ರಮುಖ ಜಂಕ್ಷನ್‍ಗಳಲ್ಲಿ ಎಐ ತಂತ್ರಜ್ಞಾನಾಧರಿತ ಸಿಗ್ನಲ್ ಕಂಟ್ರೋಲ್ ಸಿಸ್ಟಂ ಅಳವಡಿಕೆಯನ್ನು ಪೂರ್ಣಗೊಳಿಸಲಾಗಿದೆ. ಈ ಹಿಂದೆ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದ್ದ ಬೆಂಗಳೂರು ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಂ ಯೋಜನೆಯ ಮುಂದುವರೆದ ಭಾಗವಾಗಿ ನಗರದ 165 ಜಂಕ್ಷನ್‍ಗಳ ಪೈಕಿ 123 ಕಡೆಗಳಲ್ಲಿ ಹೊಸ ಸಿಗ್ನಲ್‍ಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ವಾಹನ ಸವಾರರಿಗೆ ಸುಗಮ ಸಂಚಾರ ಮಾತ್ರವಲ್ಲದೆ ಪ್ರಯಾಣದ ಸಮಯವೂ ಸಹ ಕಡಿಮೆಯಾಗುತ್ತಿದೆ ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್ ಅನುಚೇತ್ ತಿಳಿಸಿದ್ದಾರೆ. ರಸ್ತೆಗಳಲ್ಲಿ ಉಂಟಾಗುವ ಅನಿರೀಕ್ಷಿತ ಸಂಚಾರ ದಟ್ಟಣೆ ಸೇರಿದಂತೆ ವಿವಿಧ ಪರಿಸ್ಥಿತಿಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಅನುಕೂಲಕರವಾಗುಂತೆ ಸಿಡಿಎಸಿ ಸಂಸ್ಥೆ ಅಭಿವೃದ್ಧಿಪಡಿಸಿರುವ ಕಂಪೋಸಿಟ್ ಸಿಗ್ನಲ್ ಕಂಟ್ರೋಲ್ ಸ್ಟ್ರಾಟೆಜಿ ಎಟಿಸಿಎಸ್ ಅಪ್ಲಿಕೇಶನ್ ಅನ್ನು ಈ ವ್ಯವಸ್ಥೆ ಬಳಸಿಕೊಳ್ಳಲಿದೆ. ನಗರದಲ್ಲಿ ಬಳಸಲಾದ ಈ ಹಿಂದಿನ ಸಂಚಾರ ನಿರ್ವಹಣಾ ವ್ಯವಸ್ಥೆಗಿಂತ ಭಿನ್ನವಾಗಿರುವ ಬಿಎಟಿಸಿಎಸ್, ಜಂಕ್ಷನ್‍ಗಳಲ್ಲಿ ಅಳವಡಿಸಿರುವ ಕ್ಯಾಮೆರಾಗಳಿಂದ ಇನ್‍ಪುಟ್ಸ್ ಗ್ರಹಿಸಿ ಯಾವ ರಸ್ತೆಯಲ್ಲಿ ಎಷ್ಟು ವಾಹನಗಳ ಸಾಂದ್ರತೆಯಿದೆ ಎಂಬುದನ್ನು ತಿಳಿದುಕೊಂಡು ತನ್ನದೇ ವಿಶ್ಲೇಷಣೆ ಮೂಲಕ ಅತ್ಯುತ್ತಮ ಎನಿಸುವ ಆಯ್ಕೆಯನ್ನು ಸಿಗ್ನಲ್‍ಗೆ ರವಾನಿಸುತ್ತದೆ.