ಬೆಂಗಳೂರಿನಲ್ಲಿ ಮತ್ತೊಂದು ಘೋರ ಕೃತ್ಯ ; ಮದುವೆಯಾಗಲು ಒಪ್ಪದಿದ್ದಕ್ಕೆ ಮಹಿಳೆ ಮೇಲೆ ಆ್ಯಸಿಡ್ ದಾಳಿ…

69
firstsuddi

ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಮತ್ತೊಂದು ಆ್ಯಸಿಡ್ ಪ್ರಕರಣ ಬೆಳಕಿಗೆ ಬಂದಿದೆ. ಪರಿಚಯಸ್ಥನಿಂದಲೇ ಮಹಿಳೆ ಮೇಲೆ ಆ್ಯಸಿಡ್ ದಾಳಿ ನಡೆದಿದೆ. ಸದ್ಯ ಆರೋಪಿ ಅಹ್ಮದ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಅಹ್ಮದ್ ಬೆಂಗಳೂರಿನ ಗೋರಿಪಾಳ್ಯದ ನಿವಾಸಿಯಾಗಿದ್ದು, ಸಂತ್ರಸ್ತೆ ಮತ್ತು ಅಹ್ಮದ್ ಇಬ್ಬರು ಒಬ್ಬರನ್ನೊಬ್ಬರು ಇಷ್ಟ ಪಟ್ಟಿದ್ದರು. ಆದರೆ ಈ ಮೊದಲೇ ಸಂತ್ರಸ್ತೆಗೆ ಮದುವೆಯಾಗಿ ಮಗಳು ಇರುವ ಹಿನ್ನೆಲೆ ಮರು ಮದುವೆಯಾಗಲು ಕೆಲ ಸಮಯ ಅವಕಾಶ ನೀಡುವಂತೆ ಸಂತ್ರಸ್ತೆ ಕೇಳಿದ್ದರು. ಇದಕ್ಕೆ ಒಪ್ಪದ ಆರೋಪಿ ಅಹ್ಮದ್ ತಕ್ಷಣ ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ಇದೇ ವಿಚಾರವಾಗಿ ಇಬ್ಬರ ನಡುವೆ ಪದೇ, ಪದೇ ಗಲಾಟೆ ಆಗುತ್ತಿತ್ತು.

ಇಂದು ಬೆಳಗ್ಗೆ ಕೆ.ಎಸ್ ಲೇಔಟ್ ನಿಂದ ಜೆಪಿ ನಗರದ ಕಡೆ ಮಹಿಳೆ ತೆರಳುತ್ತಿದ್ದರು. ಸಾರಕ್ಕಿ ಸಿಗ್ನಲ್ ಬಳಿ ಮಹಿಳೆ ಅಡ್ಡಗಟ್ಟಿದ ಅಹ್ಮದ್ ಮಹಿಳೆ ಮುಖಕ್ಕೆ ಆ್ಯಸಿಡ್ ಹಾಕಿ ಪರಾರಿಯಾಗಿದ್ದಾನೆ. ಇದೀಗ ಸಂತ್ರಸ್ತೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ್ಯಸಿಡ್ ಬಿದ್ದ ಪರಿಣಾಮ ಸಂತ್ರಸ್ತೆಯ ಮುಖದ ಸ್ವಲ್ಪ ಭಾಗ ಗಾಯಗೊಂಡಿದ್ದು, ಬಲಗಣ್ಣಿಗೆ ಗಂಭೀರ ಗಾಯವಾಗಿದೆ.

ಈ ಪ್ರಕರಣ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಆ್ಯಸಿಡ್ ಹಾಕಿದ ಆರೋಪಿಗೆ ಕಠಿಣ ಶಿಕ್ಷೆ ಆಗುತ್ತದೆ. ಆ್ಯಸಿಡ್ ಹಾಕುವುದು ಅಮಾನವೀಯ ಕೃತ್ಯ. ಈಗಾಗಲೇ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇವೆ. ಆ್ಯಸಿಡ್ ಬ್ಯಾನ್ ಆಗಿದೆ ಎಂದು ಅನಿಸುತ್ತಿಲ್ಲ. ಅದರ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತೇನೆ. ಬ್ಯಾನ್ ಮಾಡಬಹುದಾ ಅಂತ ನೋಡುತ್ತೇವೆ ಎಂದಿದ್ದಾರೆ.