ಬೆಂಗಳೂರಿನಲ್ಲಿ ವೃದ್ಧ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ…

45
firstsuddi

ಬೆಂಗಳೂರು: ವೃದ್ಧ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ಇಟ್ಟಮಡು ಮುಖ್ಯರಸ್ತೆಯ ಕೃಷ್ಣಯ್ಯ ಲೇಔಟಿನಲ್ಲಿ ನಡೆದಿದೆ.

ಕೃಷ್ಣ ನಾಯ್ಡು (88) ಮತ್ತು ಸರೋಜಮ್ಮ (72) ಆತ್ಮಹತ್ಯೆ ಮಾಡಿಕೊಂಡ ವೃದ್ದ ದಂಪತಿ. ಆಂಧ್ರ ಮೂಲದ ದಂಪತಿ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದರು. ದಂಪತಿಗೆ ಒಬ್ಬ ಮಗನಿದ್ದು, ಪತ್ನಿ ಜೊತೆ ಬೇರೆಡೆ ವಾಸವಾಗಿದ್ದಾರೆ.

ಮೂರು ಅಂತಸ್ತಿನ ಕಟ್ಟಡದ ಮಾಲೀಕರಾಗಿದ್ದ ದಂಪತಿ ಇಂದು ಅದೇ ಕಟ್ಟಡದ ಮೇಲ್ಮಹಡಿಯ ಮೇಲಿದ್ದ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗ್ಗೆ 5.30ರ ಸುಮಾರಿಗೆ ಅಕ್ಕಪಕ್ಕದವರು ಬಾಗಿಲು ಬಡಿದಾಗ ದಂಪತಿ ಬಾಗಿಲು ತೆರೆದಿರಲಿಲ್ಲ. ಈ ವೇಳೆ ಪರಿಶೀಲಿಸಿದಾಗ ದಂಪತಿ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.

ಆತ್ಮಹತ್ಯೆಗೆ ಯಾವುದೇ ನಿಖರ ಕಾರಣ ತಿಳಿದು ಬಂದಿಲ್ಲ, ಕೌಟುಂಬಿಕ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.