ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಸರಿಪಡಿಸಲು ‘ಭಗವಂತನೇ ಬಂದ್ರು ಸಾಧ್ಯವಿಲ್ಲ’: ಡಿಕೆಶಿ ರಾಜೀನಾಮೆಗೆ ವಿಪಕ್ಷ ನಾಯಕ ಆರ್.ಅಶೋಕ್ ಒತ್ತಾಯ.

54

ಬೆಂಗಳೂರು: ಮುಂದಿನ 2 ಅಥವಾ 3 ವರ್ಷಗಳಲ್ಲಿ ಬೆಂಗಳೂರಿನ ಟ್ರಾಫಿಕ್ ಅನ್ನು ಭಗವಂತನೇ ಬಂದ್ರು ಸರಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಇಂದು ಆಗ್ರಹಿಸಿದೆ. ನಗರದ ಟ್ರಾಫಿಕ್ ಸಮಸ್ಯೆಗಳನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ ಡಿಕೆಶಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಮಸ್ಯೆಗಳನ್ನು ನಿಭಾಯಿಸುವ ಸಮರ್ಥ ವ್ಯಕ್ತಿಗೆ ಅವಕಾಶ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಒತ್ತಾಯಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ ಶಿವಕುಮಾರ್ ಅವರು ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ, ನಾನು ಮಾಧ್ಯಮ ಸ್ನೇಹಿತರಿಗೆ ಮತ್ತು ಇತರರಿಗೆ ಹೇಳಲು ಬಯಸುತ್ತೇನೆ, ಸ್ವತಃ ದೇವರೇ ಮೇಲಿನಿಂದ ಇಳಿದು ಬಂದರೂ, ಮುಂದಿನ 1 ವರ್ಷ, 2 ವರ್ಷ ಅಥವಾ 3 ವರ್ಷಗಳಲ್ಲಿ ಬೆಂಗಳೂರನ್ನು ಸರಿಪಡಿಸಲು ಸಾಧ್ಯವಿಲ್ಲ. ಈ ಸಮಸ್ಯೆಗಳನ್ನು ಸರಿಪಡಿಸಲು ನಾವು ಸರಿಯಾಗಿ ಯೋಜಿಸಬೇಕು, ಯೋಜನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸಬೇಕು ಮತ್ತು ಮುಂದಿನ ದಿನಗಳಿಗೆ ಸರಿಯಾದ ರೂಪರೇಷೆ ನೀಡಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಆರ್ ಅಶೋಕ್, ಬ್ರ್ಯಾಂಡ್ ಬೆಂಗಳೂರು ನಿರ್ಮಾಣ ಮಾಡುತ್ತೇನೆ ಎಂದು ಡಂಗೂರ ಸಾರಿದ್ದ ಪಾರ್ಟ್ ಟೈಂ ಬೆಂಗಳೂರು ಅಭಿವೃದ್ಧಿ ಮಂತ್ರಿಗಳ ಹೊಸ ವರಸೆ ನೋಡಿ. ಸ್ವತಃ ಭಗವಂತನೇ ಬಂದ್ರು 2-3 ವರ್ಷ ಬೆಂಗಳೂರಿನ ಅಭಿವೃದ್ಧಿ ಸಾಧ್ಯವಿಲ್ಲವಂತೆ. ಇದು ಡಿಸಿಎಂ ಸಾಹೇಬರ ನುಡಿಮುತ್ತುಗಳು ಎಂದು ವ್ಯಂಗ್ಯ ಮಾಡಿದ್ದಾರೆ. ಬೆಂಗಳೂರಿನ ನಾಗರಿಕರ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿಯನ್ನು ಡಿಸಿಎಂ ಡಿ.ಕೆ ಶಿವಕುಮಾರ್ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ, ಅವರು ರಾಜೀನಾಮೆ ನೀಡಿ ಸಮರ್ಥ ವ್ಯಕ್ತಿಗೆ ದಾರಿ ಮಾಡಿಕೊಡಿ. ನಿಮ್ಮ ರಾಜಕೀಯ ಪ್ರತಿಷ್ಠೆಗೆ, ಅಧಿಕಾರದ ದುರಾಸೆಗೆ ಬೆಂಗಳೂರು ನಗರದ ಅಭಿವೃದ್ಧಿಯನ್ನು ಯಾಕೆ ಬಲಿ ಕೊಡುತ್ತೀರಿ ಎಂದು ಆರ್ ಅಶೋಕ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.