ಮುಡಾ ಫೈಲ್‍ಗಳು ಚಾಮುಂಡೇಶ್ವರಿ ದೇವಸ್ಥಾನದ ಮುಂದೆ ಮಾರುವ ಕಡ್ಲೆಪುರಿಯಲ್ಲ: ಸಚಿವ ಬೈರತಿ ಸುರೇಶ್.

45

ಮೈಸೂರು: ಲೋಕಾಯುಕ್ತರು ವಾಸ್ತವ ಸ್ಥಿತಿಗತಿಗಳನ್ನು ತನಿಖೆ ಮಾಡಿ ವರದಿ ನೀಡಿದ್ದಾರೆ. ನಾನು ಮುಡಾ ಫೈಲ್‍ಗಳನ್ನು ತೆಗೆದುಕೊಂಡು ಹೋಗಿಲ್ಲ. ಮುಡಾ ಫೈಲ್‍ಗಳು ಚಾಮುಂಡೇಶ್ವರಿ ದೇವಸ್ಥಾನದ ಮುಂದೆ ಮಾರುವ ಕಡ್ಲೆಪುರಿಯಲ್ಲ ತೆಗೆದುಕೊಂಡು ಹೋಗಲು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು. ಇಂದು ಚಾಮುಂಡಿ ಬೆಟ್ಟಕ್ಕೆ ಕುಟುಂಬಸಮೇತ ಭೇಟಿ ನೀಡಿ, ದೇವಿಯ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಫೈಲ್ ಮಿಸ್ಸಿಂಗ್ ಅಂತಾ ಯಾವ ವರದಿಯಲ್ಲಿದೆ. ಫೈಲ್ ಎತ್ತಿಕೊಂಡು ಹೋಗುವುದು ಅಷ್ಟೊಂದು ಸುಲಭನಾ?. ಕ್ಯಾಮೆರಾ ಸೇರಿ ಎಲ್ಲರ ಮುಂದೆ ಹೇಗೆ ತೆಗೆದುಕೊಂಡು ಹೋಗಲು ಸಾಧ್ಯ. ಅದರಲ್ಲೂ 141 ಫೈಲ್ ಅಂತಾ ಹೇಳಿದ್ದಾರೆ. ಇವರಿಗೆ ಆ ನಂಬರ್ ನೀಡಿದವರು ಯಾರು?. ಬಹುಶಃ ಈ ಆರೋಪ ಮಾಡಿದವರೇ ಫೈಲ್ ತೆಗೆದುಕೊಂಡು ಹೋಗಿರಬೇಕು ಎಂದು ಹೇಳಿದರು.
ಮುಡಾ ಹಗರಣದಲ್ಲಿ ಅಕ್ರಮ ಮಾಡಿದವರನ್ನು ಬಿಡುವ ಪ್ರಶ್ನೆಯೇ ಇಲ್ಲ. ಲೋಕಾಯುಕ್ತ ಪೆÇಲೀಸರು ಕ್ಲೀನ್‍ಚಿಟ್ ನೀಡಿ ಸಲ್ಲಿಸಿರುವ ವರದಿಯನ್ನು ಟೀಕಿಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್‍ನವರಿಗೆ ಮಾನ-ಮರ್ಯಾದೆ ಇಲ್ಲ. ಮಾನ-ಮರ್ಯಾದೆ ಇಲ್ಲದವರು ಮಾತ್ರ ಲೋಕಾಯುಕ್ತ ರಿಪೋರ್ಟ್ ಅನ್ನು ಟೀಕಿಸಬೇಕು. ನಾವು ಏನೂ ತಪ್ಪು ಮಾಡಿಲ್ಲ. ಬನ್ನಿ ಚಾಮುಂಡೇಶ್ವರಿ ದೇವಿ ಮುಂದೆ ಆಣೆ ಮಾಡಿ ಅಂತ ಕರೆದಿದ್ದೆ, ಯಾರೂ ಆಣೆ ಮಾಡಲು ಬರಲಿಲ್ಲ. ಲೋಕಾಯುಕ್ತ ಬಲಶಾಲಿಯಾಗಿದೆ. ಹಿಂದಿನ ಮುಖ್ಯಮಂತ್ರಿಗಳು ತಪ್ಪು ಮಾಡಿದ್ರು, ಅವರನ್ನು ಜೈಲಿಗೆ ಕಳುಹಿಸುವಂತೆ ಮಾಡಿದ ಸಂಸ್ಥೆ ಲೋಕಾಯುಕ್ತ ಎಂದು ತಿಳಿಸಿದರು.                                                                                50:50ರ ಅನುಪಾತದ ಹಂಚಿಕೆಯ ಬಗ್ಗೆ ಸಾಧಕ-ಬಾಧಕಗಳನ್ನು ದೇಸಾಯಿ ಕಮಿಟಿ ನೋಡಿಕೊಳ್ಳುತ್ತದೆ. ಅವರು ನೀಡಿದ ವರದಿಯ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ರಾಜ್ಯದ ಜನರಿಗೆ ಈಗ ಸತ್ಯ ಗೊತ್ತಾಗಿದೆ. ಸಿದ್ದರಾಮಯ್ಯ ಯಾವತ್ತೂ ಅಕ್ರಮ ಮಾಡಿಲ್ಲ, ತಪ್ಪು ಮಾಡಿಲ್ಲ. ಬಿಜೆಪಿಯವರು ಸುಳ್ಳು ಹೇಳಿಕೊಂಡು ಮೈಸೂರು, ಮಂಗಳೂರು ಯಾತ್ರೆ ಮಾಡಿದರು. ಪಾರ್ವತಿಯವರ ಭೂಮಿ ಹೋಗಿತ್ತು, ಅದಕ್ಕೆ ಪರಿಹಾರ ಬಂದಿದೆ ಅಷ್ಟೇ ಎಂದು ಹೇಳಿದರು.
ಲೋಕಾಯುಕ್ತ ವರದಿಯಲ್ಲಿ ಅಧಿಕಾರಿಗಳು ತಪ್ಪು ಮಾಡಿದ್ದಾರೆ ಎಂದು ತಿಳಿದು ಬಂದರೆ, ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಮುಡಾ ಜಮೀನು ಒತ್ತುವರಿ ಮಾಡಿ ನಿವೇಶ ಮಾಡಿದ್ದರೆ, ಭೂ ಮಾಲೀಕರಿಗೆ ಏನು ಪರಿಹಾರ ನೀಡಬೇಕು?, ಹೇಗೆ ನೀಡಬೇಕು ಎಂಬ ಸೂಚನೆಯನ್ನು ದೇಸಾಯಿ ವರದಿ ಮತ್ತು ಏಕಸದ್ಯಸ್ಯ ಪೀಠವು ವರದಿ ನೀಡಲಿದೆ. ಮುಡಾದಲ್ಲಿ ಅಕ್ರಮ ಮಾಡಿದ ಒಬ್ಬರನ್ನೂ ಬಿಡುವ ಪ್ರಶ್ನೆಯೇ ಇಲ್ಲ. 50:50 ಅಕ್ರಮದ ಬಗ್ಗೆ ಪಿ.ಎನ್ ದೇಸಾಯಿ ಆಯೋಗ ತನಿಖೆ ಮುಗಿದ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.