ಬೆಂಗಳೂರು: ನಗರದ ಪ್ರತಿಷ್ಟಿತ ಐಟಿಬಿಟಿ ಕಂಪನಿಗೆ ಬಾಂಬ್ ಹಾಕುವುದಾಗಿ ಬೆದರಿಕೆ ಕರೆ ಬಂದಿದೆ.
ಬೆಳ್ಳಂದೂರಿನ ಇಕೋ ಸ್ಪೇಸ್ ನ ಐಡಿಬಿಒ ಅನ್ನೋ ಕಂಪನಿಗೆ ಬಾಂಬ್ ಹಾಕುವುದಾಗಿ ಬೆದರಿಕೆ ಕರೆ ಬಂದಿದ್ದು, ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಅನಾಮಧೇಯ ವ್ಯಕ್ತಿಯಿಂದ ಫೋನ್ ಕರೆ ಬಂದಿದೆ. ಬಾಂಬ್ ಇಟ್ಟಿದ್ದೀವಿ ಸ್ವಲ್ಪ ಸಮಯದಲ್ಲಿ ಬ್ಲಾಸ್ಟ್ ಆಗುತ್ತೆ ಅಂತ ಕರೆ ಮಾಡಿ ತಿಳಿಸಿದ್ದಾನೆ.
ಕರೆ ಬಂದ ಕೂಡಲೇ ಸ್ಥಳೀಯ ಪೊಲೀಸರಿಗೆ, ಕಂಪನಿ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಬೆಳ್ಳಂದೂರು ಪೊಲೀಸರು, ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯದಳ ಸ್ಥಳಕ್ಕೆ ದೌಡಾಯಿಸಿದ್ದಾರೆ. ಐಎಸ್ ಡಿ ಅಧಿಕಾರಿಗಳ ತಂಡವೂ ಸ್ಥಳಕ್ಕೆ ಧಾವಿಸಿದ್ದು, ತಪಾಸಣೆ ನಡೆಸಲಾಗಿದೆ.
ಕೆಲವೇ ದಿನಗಳ ಹಿಂದೆ ಕೆಲಸ ಬಿಟ್ಟಿದ್ದ ವ್ಯಕ್ತಿಯಿಂದ ಹುಸಿ ಬಾಂಬ್ ಕರೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.










