ಬೆಂಗಳೂರು : ನಗರದ ಎರಡು ಖಾಸಗಿ ಶಾಲೆಗಳಲ್ಲಿ ಕೊರೊನಾ ಸ್ಫೋಟಗೊಂಡಿದೆ. ದಾಸರಹಳ್ಳಿ ವಲಯದ ರಾಜ ಗೋಪಾಲನಗರದಲ್ಲಿ ಇರುವ ನ್ಯೂ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮತ್ತು ಎಂಇಎಸ್ ಪಬ್ಲಿಕ್ ಸ್ಕೂಲ್ ಎರಡು ಖಾಸಗಿ ಶಾಲೆಗಳಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗಿದೆ.
ನ್ಯೂ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ 5 ಮತ್ತು 6 ನೇ ತರಗತಿಯಲ್ಲಿ ಓದುತ್ತಿದ್ದ 21 ಮಕ್ಕಳಿಗೆ ಕೊರೊನಾ ಇರುವುದು ದೃಢಪಟ್ಟಿದ್ದು, ಎಂಇಎಸ್ ಪಬ್ಲಿಕ್ ಸ್ಕೂಲ್ ನಲ್ಲಿ 5 ನೇ ತರಗತಿಯಲ್ಲಿ ಓದುತ್ತಿದ್ದ 10 ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸದ್ಯ ಎಲ್ಲಾ ಮಕ್ಕಳಿಗೂ ಮತ್ತು ಶಾಲಾ ಸಿಬ್ಬಂದಿಗೂ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ಶಾಲೆಗಳನ್ನು ಕಂಟೈನ್ಮೆಂಟ್ ಅಂತ ಘೋಷಣೆ ಮಾಡಲಾಗಿದೆ.
ನಗರದಲ್ಲಿ ನಿನ್ನೆ 400 ಪಾಸಿಟಿವ್ ಕೇಸ್ ವರದಿಯಾಗಿದೆ. ಉಳಿದಂತೆ ನಗರದಲ್ಲಿ ನಿನ್ನೆ 358 ಮಂದಿ ಗುಣಮುಖರಾಗಿದ್ದು, ಸೋಂಕಿತರ ಸಾವಿನ ಬಗ್ಗೆ ವರದಿಯಾಗಿಲ್ಲ. ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,542ಕ್ಕೆ ಏರಿಕೆ ಕಂಡಿದೆ.
ನಿನ್ನೆ ಕೊರೊನಾ ಸಂಬಂಧ ಆರೋಗ್ಯ ಸಚಿವ ಸುಧಾಕರ್ ಅವರು ಸಭೆ ನಡೆಸಿ ಅಗತ್ಯ ಕ್ರಮಗಳ ಭರವಸೆ ನೀಡಿದ್ದಾರೆ. ಐಐಟಿ ತಜ್ಞರ ಪ್ರಕಾರ ಜುಲೈನಲ್ಲಿ ನಾಲ್ಕನೇ ಸಾಧ್ಯತೆ ಎಂದಿದ್ದಾರೆ. ಆಸ್ಪತ್ರೆ ದಾಖಲಾತಿ ಕಡಿಮೆಯಿದ್ದರೂ ಕೂಡ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ್ದಾರೆ. ಹೀಗಾಗಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿದೆ. ಮಾಸ್ಕ್ ಧರಿಸದೇ ಇದ್ದರೆ ದಂಡದ ಪ್ರಸ್ತಾಪ ಇದ್ದರೂ ಕೂಡ, ಸದ್ಯಕ್ಕೆ ಅದರ ಅಗತ್ಯ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.










