ಬೆಂಗಳೂರು : ಕೆಸಿ ಜನರಲ್ ಆಸ್ಪತ್ರೆಯಲ್ಲಿ ತಪ್ಪಿದ ಭಾರೀ ಅನಾಹುತ , ಉಳಿಯಿತು 200 ಸೋಂಕಿತರ ಜೀವ…

101
firstsuddi

ಬೆಂಗಳೂರು : ಮಲ್ಲೇಶ್ವರಂನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಸಂಭವಿಸಬೇಕಾಗಿದ್ದ ಭಾರೀ ಅನಾಹುತವೊಂದು ತಪ್ಪಿದೆ.

ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ವೈದ್ಯರು ಮತ್ತು ಇಡೀ ಆಸ್ಪತ್ರೆಯ ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆ ಹಾಗೂ ಮುನ್ನೆಚ್ಚರಿಕೆ ಫಲವಾಗಿ ಆಕ್ಸಿಜನ್ ದುರಂತ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಸ್ವಲ್ಪದರಲ್ಲೇ ತಪ್ಪಿದ್ದು 200 ಸೊಂಕಿತರ ಜೀವ ಉಳಿದಿದೆ.

ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 200 ಸೋಂಕಿತರು ಆಕ್ಸಿಜನ್ ಬೆಡ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರಿಗೆ ಒದಗಿಸಲಾಗುತ್ತಿದ್ದ ಆಮ್ಲಜನಕವು ರಾತ್ರಿಯ ವೇಳೆಗೆ ಖಾಲಿಯಾಗುತ್ತಾ ಬಂದಿತ್ತು. ಪ್ರಾಕ್ಸಿ ಏರ್ ಎನ್ನುವ ಕಂಪನಿ ನಿನ್ನೆ ರಾತ್ರಿ 11 ಗಂಟೆಗೆ ಆಸ್ಪತ್ರೆಗೆ ಆಮ್ಲಜನಕ ಪೂರೈಕೆ ಮಾಡಬೇಕಾಗಿತ್ತು. ಆದರೆ, ಬಳ್ಳಾರಿಯಿಂದ ಬರಬೇಕಾಗಿದ್ದ ಆ ಕಂಪನಿಯ ಟ್ಯಾಂಕರ್ ರಾತ್ರಿ 11.30 ಆದರೂ ಬರಲೇ ಇಲ್ಲ. ಬದಲಿಗೆ ಆ ಟ್ಯಾಂಕರ್ ಕೆ.ಸಿ.ಜನರಲ್ಗೆ ಬರುವ ಬದಲು ಖಾಸಗಿ ಆಸ್ಪತ್ರೆಗೆ ಹೋಗಿದೆ ಎಂಬ ವಿಷಯ ತಿಳಿದುಬಂದಿದೆ.

ಆಕ್ಸಿಜನ್ ಕಡಿಮೆಯಾಗುತ್ತಿರುವ ವಿಷಯ ಗೊತ್ತಾದ ಕೂಡಲೇ ಸಿಬ್ಬಂದಿ, ಆಕ್ಸಿಜನ್ ನಿರ್ವಹಣೆ ಹೊಣೆ ಹೊತ್ತಿದ್ದ ವೈದ್ಯಾಧಿಕಾರಿ ಡಾ.ರೇಣುಕಾ ಪ್ರಸಾದ್ ಗಮನಕ್ಕೆ ತಂದಿದ್ದಾರೆ. ಕೂಡಲೇ ಡಾ. ರೇಣುಕಾ ಪ್ರಸಾದ್ ಅವರು ಪ್ರಾಕ್ಸಿ ಏರ್ ಸಂಸ್ಥೆಯನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅವರ ಪ್ರಯತ್ನಗಳು ವಿಫಲವಾದವು. ಕೂಡಲೆ ಅವರು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ಮಧ್ಯರಾತ್ರಿ 12.30ರ ಹೊತ್ತಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತರಾದ ಡಿಸಿಎಂ, ಆಮ್ಲಜನಕ ಎಲ್ಲೆಲ್ಲಿ ಲಭ್ಯವಿದೆ ಎಂಬುದನ್ನು ಕ್ಷಿಪ್ರವಾಗಿ ಪತ್ತೆ ಹಚ್ಚಿ ಕೊನೆಗೆ ಯುನಿವರ್ಸಲ್ ಎಂಬ ಕಂಪನಿ ಜತೆ ಮಾತನಾಡಿ ತುರ್ತಾಗಿ ಆಕ್ಸಿಜನ್ ವ್ಯವಸ್ಥೆ ಮಾಡುವಲ್ಲಿ ಯಶಸ್ವಿಯಾದರು.

ಯುನಿವರ್ಸಲ್ ಕಂಪನಿಯಿಂದ ಆಕ್ಸಿಜನ್ ವ್ಯವಸ್ಥೆ ಮಾಡಿದ ಡಿಸಿಎಂ, ಮಲ್ಲೇಶ್ವರಂ ಪೊಲೀಸರ ಜೊತೆ ಮಾತನಾಡಿ ಆಮ್ಲಜನಕದ ನಿರಂತರ ಸಾಗಣೆಗೆ ನೆರವಾಗುವಂತೆ ಸೂಚಿಸಿದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಯುನಿವರ್ಸಲ್ ಕಂಪನಿ-ಕೆ.ಸಿ.ಜನರಲ್ ನಡುವಿನ ಮಾರ್ಗಮಧ್ಯೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿ ಮೊದಲು 20 ಜಂಬೋ ಸಿಲಿಂಡರ್ಗಳನ್ನು ತರಿಸಲು ಸಹಕರಿಸಿದ್ದಾರೆ. ಅರೆಕ್ಷಣವೂ ಸಮಯ ಪೋಲು ಮಾಡದೇ ಇಡೀ ಆಸ್ಪತ್ರೆಯ ಸಿಬ್ಬಂದಿಯೆಲ್ಲಾ ಒಟ್ಟಾಗಿ ಸೇರಿ ಬೆಳಗ್ಗಿನ ಜಾವ 4.45 ರವರೆಗೆ ರೋಗಿಗಳಿಗೆ ಆ ಸಿಲಿಂಡರ್ಗಳ ಮೂಲಕವೇ ಆಮ್ಲಜನಕ ಸಂಪರ್ಕ ಕಲ್ಪಿಸಿದ್ದಾರೆ. ಇದಾದ ಸ್ವಲ್ಪ ಹೊತ್ತಿನಲ್ಲಿಯೇ ಲಿಕ್ವಿಡ್ ಆಕ್ಸಿಜನ್ ಇರುವ ಟ್ಯಾಂಕರ್ ಕೂಡ ಯುನಿವರ್ಸಲ್ ಕಂಪನಿಯಿಂದ ಕೆ.ಸಿ.ಜನರಲ್ ಆಸ್ಪತ್ರೆಗೆ ಬಂದಿದ್ದು, ಇಡೀ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಸೋಂಕಿತರ ಆರೋಗ್ಯದಲ್ಲಿ ಏರುಪೇರು ಆಗಿಲ್ಲ. ನಿನ್ನೆ ರಾತ್ರಿ 11.30ರಿಂದ ಇಂದು ಬೆಳಗ್ಗಿನ ಜಾವ 4.45ರ ವರೆಗೂ ಎಲ್ಲಾ 200 ಸೋಂಕಿತರ ಮೇಲೆ ತೀವ್ರ ನಿಗಾ ಇಟ್ಟ ಸಿಬ್ಬಂದಿ ಸಂಕಷ್ಟದ ಸಮಯದಲ್ಲಿ ಆಮ್ಲಜನಕದ ಉಳಿತಾಯಕ್ಕೂ ಶ್ರಮಿಸಿದರು.

ಇನ್ನೂ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಾ. ಅಶ್ವತ್ಥನಾರಾಯಣ ‘ಚಾಮರಾಜನಗರ ಸೇರಿದಂತೆ ರಾಜ್ಯದ ಹಲವೆಡೆ ಆಕ್ಸಿಜನ್ ಕೊರತೆಯಿಂದ ಉಂಟಾಗಿದ್ದ ದುರಂತಗಳು ನಮ್ಮ ಕಣ್ಮುಂದಿವೆ. ಹೀಗಾಗಿ ವಿಷಯ ಗೊತ್ತಾಗುತ್ತಿದ್ದಂತೆ ನಾನು ಕಾರ್ಯಪ್ರವೃತ್ತನಾದೆ. ಆಕ್ಸಿಜನ್ ತರಿಸುವುದರ ಜೊತೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಜೀವ ರಕ್ಷಣೆ ಮಾಡುವ ಎರಡೂ ಸವಾಲುಗಳನ್ನು ಏಕಕಾಲಕ್ಕೆ ಎದುರಿಸಬೇಕಾಯಿತು. ನಾನು ಆಕ್ಸಿಜನ್ ವ್ಯವಸ್ಥೆ ಮಾಡುವ ಕೆಲಸ ಮಾಡಿದೆ. ವೈದ್ಯರು ಮತ್ತು ಸಿಬ್ಬಂದಿ ಸೋಂಕಿತರನ್ನು ನೋಡಿಕೊಂಡರು. ಪೊಲೀಸರು ಸಕಾಲಕ್ಕೆ ನೆರವಾದರು. ಇಡೀ ರಾತ್ರಿ ನಡೆದ ಕಾರ್ಯಾಚರಣೆಯಿಂದ ಅಮೂಲ್ಯ ಜೀವಗಳು ಉಳಿದವು’ ಎಂದರು.