ಬೆಂಗಳೂರು: ಶಕ್ತಿ ಯೋಜನೆ ವಿರೋಧಿಸಿ ಜುಲೈ 27 ರಂದು ಆಟೋ, ಟ್ಯಾಕ್ಸಿ, ಓಲಾ, ಉಬರ್ ಸೇರಿದಂತೆ ಖಾಸಗಿ ಬಸ್ಗಳು ಸಂಚಾರ ಸ್ಥಗಿತಗೊಳಿಸಲಿವೆ. ಕರ್ನಾಟಕ ಖಾಸಗಿ ಸಾರಿಗೆ ಸಂಘಟನೆ ಒಕ್ಕೂಟದಿಂದ ಬಂದ್ಗೆ ಕರೆ ನೀಡಿದ್ದು, ಇದಕ್ಕೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದೆ.
ರಾಜ್ಯದ 23 ಸಾರಿಗೆ ಸಂಘಟನೆಗಳು ಸೇರಿ ಈ ನಿರ್ಧಾರ ಮಾಡಿರುತ್ತದೆ. ಈ ಕುರಿತಂತೆ ಇಂದು ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಖಾಸಗಿ ಸಾರಿಗೆ ಸಂಘಟನೆ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ, ಜು. 27 ರಂದು ಬಂದ್ ಆಚರಿಸಲು ತೀರ್ಮಾನ ಮಾಡಿದ್ದೇವೆ. 26ರ ಮಧ್ಯರಾತ್ರಿ 12 ರಿಂದ 27ರ ಮಧ್ಯರಾತ್ರಿ 12 ಗಂಟೆಯವರೆಗೂ ಆಟೋ, ಟ್ಯಾಕ್ಸಿ, ಓಲಾ, ಊಬರ್ ಸೇರಿದಂತೆ ಯಾವುದೇ ಖಾಸಗಿ ವಾಹನಗಳ ಓಡಾಟ ಇರೋದಿಲ್ಲ. ಖಾಸಗಿ ಸಾರಿಗೆಯ ಮಾಲೀಕರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಹಾಗಾಗಿ ಸರ್ಕಾರದ ಗಮನಸೆಳೆಯುತ್ತೇವೆ. ಖಾಸಗಿ ಬಸ್ ಗಳು ಕೂಡ ಓಡಾಟ ಮಾಡಲ್ಲ. ಬೆಂಗಳೂರಿನಲ್ಲಿ ಇರುವ ಖಾಸಗಿ ಮಾಲೀಕರಿಗೆ ಈ ಕುರಿತಾಗಿ ಮನವಿ ಮಾಡುತ್ತೇವೆ’ ಎಂದು ತಿಳಿಸಿದ್ದಾರೆ.
ಶಕ್ತಿ ಯೋಜನೆಯಿಂದ ತುಂಬಾ ಹೊಡೆತ ಬಿದ್ದಿದೆ. ಶಕ್ತಿಯೋಜನೆಗೆ ಒಂದು ಮಾರ್ಗಸೂಚಿ ಬಿಡುಗಡೆ ಮಾಡಿ. ಒಂದು ಮಾರ್ಗಸೂಚಿ ಇಲ್ಲದೇ ತಮ್ಮ ಖಾಸಗಿ ಬಸ್‌ಗಳಲ್ಲಿ ನಷ್ಟವಾಗುತ್ತಿದೆ. ಬಸ್‌ಗಳಲ್ಲಿ ಎಷ್ಟು ಸೀಟ್ ಇರುತ್ತದೆಯೋ ಅಷ್ಟೇ ಸೀಟ್ ಹಾಕಬೇಕು. ಆದರೆ, ಬಸ್‌ನಲ್ಲಿ ಸ್ಟ್ಯಾಂಡಿಂಗ್‌ನಲ್ಲಿ ನಿಲ್ಲಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದಾಗಿ ಖಾಸಗಿ ಬಸ್‌ಗಳಲ್ಲಿ ಜನ ಬರುತ್ತಿಲ್ಲ. ಟೂರಿಸ್ಟ್ ಬಸ್ ಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಸರ್ಕಾರಿ ಬಸ್ ಗಳಂತೆ ಖಾಸಗಿ ಬಸ್ ಗಳನ್ನು ಶಕ್ತಿ ಯೋಜನೆಗೆ ಬಳಸಿಕೊಳ್ಳಿ ಎಂದು ನಾಗರಾಜ್ ಶರ್ಮ ಹೇಳಿದ್ದಾರೆ.
ಸಾರಿಗೆ ಸಂಘಟನೆಗಳ ಬಂದ್ ಗೆ ಕನ್ನಡ ಸಂಘಟನೆಗಳು ಬೆಂಬಲ ನೀಡಲಿದೆ. ಕನ್ನಡ ಸಂಘಟನೆಗಳು ಬಂದ್ ನಲ್ಲಿ ಹೋರಾಟ ಮಾಡಲಿವೆ. ನಾವು ಬೇರೆ ಬೇರೆ ಸಂಘಟನೆಗಳ ಬೆಂಬಲವನ್ನು ಕೋರಿದ್ದೇವೆ. ಬೇರೆ ಸಂಘಟನೆಗಳು ಬೆಂಬಲ ಕೊಡ್ತಾರೆ ಎಂದು ಆದರ್ಶ್ ಆಟೋ ಮಂಜುನಾಥ್ ಹೇಳಿದ್ದಾರೆ.










