ನವದೆಹಲಿ: ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ, ಅಮಾನವೀಯವಾಗಿ ನಡೆದುಕೊಂಡಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ ವೀಡಿಯೊಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮಣಿಪುರ ಘಟನೆಯು ಸಭ್ಯ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ. ನನ್ನ ಹೃದಯವು ನೋವು ಮತ್ತು ಕೋಪದಿಂದ ತುಂಬಿದೆ ಎಂದು ಹೇಳಿದರು.
ನಾನು ದೇಶದ ಜನತೆಗೆ ಭರವಸೆ ನೀಡುತ್ತೇನೆ. ಪ್ರಕರಣದ ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಕಾನೂನು ತನ್ನ ಎಲ್ಲಾ ಶಕ್ತಿಯೊಂದಿಗೆ ತನ್ನ ಕ್ರಮ ತೆಗೆದುಕೊಳ್ಳುತ್ತದೆ. ಮಣಿಪುರದ ಸಹೋದರಿಯರ ಜೊತೆಗೆ ನಡೆದ ಘಟನೆ ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ರಾಜಸ್ಥಾನ, ಮಣಿಪುರ ಅಥವಾ ಛತ್ತೀಸ್‌ಗಢ ಆಗಿರಲಿ, ನಮ್ಮ ಎಲ್ಲಾ ಮಹಿಳೆಯರಿಗೆ ರಕ್ಷಣೆ ನೀಡಲು ಕಠಿಣ ಕಾನೂನು ಜಾರಿ ಮಾಡಲು ನಾನು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ತಿಳಿಸುತ್ತೇನೆ. ರಾಜಕೀಯಕ್ಕಿಂತ ಮಿಗಿಲಾಗಿ ಮಹಿಳೆಯರ ರಕ್ಷಣೆ ಬಗ್ಗೆ ನಾವು ಚಿಂತಿಸಬೇಕು ಎಂದು ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮುಂಚಿತವಾಗಿ ಪ್ರಧಾನಿ ಮೋದಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಣಿಪುರ ಸಿಎಂ ಬಿರೇನ್ ಸಿಂಗ್‌ಗೆ ದೂರವಾಣಿ ಮೂಲಕ ಮಾತನಾಡಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಸೂಚನೆ ಕೊಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಣಿಪುರ ಸಿಎಂ ಎನ್ ಬಿರೇನ್ ಸಿಂಗ್ ಟ್ಟೀಟ್ ಮಾಡಿದ್ದು, ವೈರಲ್ ಆಗಿರುವ ವೀಡಿಯೊ ಕಂಡು ಆಘಾತವಾಗಿದೆ. ಅಮಾನವೀಯ ಕೃತ್ಯಕ್ಕೆ ಒಳಗಾದ ಅವರ ಪರವಾಗಿ ನನ್ನ ಹೃದಯ ಮಿಡಿಯುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸುಮೊಟೋ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಓರ್ವನನ್ನು ಈಗಾಗಲೇ ಬಂಧಿಸಲಾಗಿದೆ. ಸೂಕ್ತ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರಿಗೆ ಮರಣದಂಡನೆ ಸೇರಿದಂತೆ ಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳಲಾಗುವುದು. ಸಮಾಜದಲ್ಲಿ ಇಂತಹ ಹೇಯ ಕೃತ್ಯಗಳಿಗೆ ಯಾವುದೇ ಸ್ಥಾನವಿಲ್ಲ ಎಂದು ಹೇಳಿದರು.
ಮಣಿಪುರದ ಗುಡ್ಡಗಾಡು ಪ್ರದೇಶಗಳಲ್ಲಿ ಇಬ್ಬರು ಮಹಿಳೆಯರನ್ನ ಬೆತ್ತಲೆಯಾಗಿ ಮೆರವಣಿಗೆ ಮಾಡುವ ಎರಡು ತಿಂಗಳ ಹಳೆಯ ವೀಡಿಯೊ ನಿನ್ನೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಪ್ರಕರಣ ಸಾಕಷ್ಟು ಗಂಭೀರತೆ ಪಡೆದುಕೊಂಡಿದೆ.










