ಬೆಂಗಳೂರು : ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್ ದರ ಹೆಚ್ಚಳಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ದರ ಹೆಚ್ಚಳ ಆದೇಶವನ್ನು ವಾಪಸ್ ಪಡೆದಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶೇಕಡಾ 22ರಷ್ಟು ಟೋಲ್ ದರ ಹೆಚ್ಚಳ ಮಾಡಿ ನಿನ್ನೆ ಆದೇಶ ಹೊರಡಿಸಿತ್ತು. ಈ ಪರಿಷ್ಕೃತ ದರ ಇಂದಿನಿಂದ ಜಾರಿಗೆ ಬರಬೇಕಿತ್ತು. ಆದರೆ ಸಾರ್ವಜನಿಕರಿಂದ ತೀವ್ರ ವಿರೋಧ ಬಂದ ಹಿನ್ನೆಲೆಯಲ್ಲಿ ತನ್ನ ಆದೇಶವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಾಪಸ್ ಪಡೆದಿದೆ.
ಕೇಂದ್ರ ಹೆದ್ದಾರಿ ಪ್ರಾಧಿಕಾರದ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008ರ ಪ್ರಕಾರ, ಹಳೆಯ ದರಕ್ಕಿಂತ ಶೇ.22ರಷ್ಟು ಟೋಲ್ ದರ ಏರಿಕೆಯಾಗಿತ್ತು. ಕಾರು, ವ್ಯಾನ್ ಹಾಗೂ ಜೀಪ್ ಗೆ ಏಕಮುಖ ಸಂಚಾರ 165 ರೂ. ನಿಗದಿ (30ರೂ. ಹೆಚ್ಚಳ) ಮಾಡಲಾಗಿದೆ. ದ್ವಿಮುಖ ಸಂಚಾರಕ್ಕೆ 250 ರೂ. (45 ರೂ. ಹೆಚ್ಚಳ), ಲಘು ವಾಹನಗಳು ಹಾಗೂ ಮಿನಿ ಬಸ್ ಗೆ 270 ರೂ. (50 ರೂ. ಹೆಚ್ಚಳ), ದ್ವಿಮುಖ ಸಂಚಾರ 405 ರೂ. (75 ರೂ. ಹೆಚ್ಚಳ), ಟ್ರಕ್, ಬಸ್ ಹಾಗೂ ಎರಡು ಆಕ್ಸೆಲ್ ವಾಹನ 565 ರೂ. (165 ರೂ. ಹೆಚ್ಚಳ), ದ್ವಿಮುಖ ಸಂಚಾರ 850 ರೂ. (160 ರೂ. ಹೆಚ್ಚಳ), ಮೂರು ಆಕ್ಸೆಲ್ ವಾಣಿಜ್ಯ ವಾಹನಗಳು ಏಕಮುಖ ಸಂಚಾರ 615 ರೂ. (115 ರೂ. ಹೆಚ್ಚಳ), ದ್ವಿಮುಖ ಸಂಚಾರ 925 ರೂ. (225 ರೂ. ಹೆಚ್ಚಳ), ಭಾರಿ ಕಟ್ಟಡ ನಿರ್ಮಾಣ ವಾಹಗನಳು, ಅರ್ಥ್ ಮೂವರ್ಸ್ 4-6 ಆಕ್ಸೆಲ್ ವಾಹನಗಳು 885 ರೂ. (165 ರೂ. ಹೆಚ್ಚಳ), ದ್ವಿಮುಖ ಸಂಚಾರ 1,330 ರೂ. (250 ರೂ. ಹೆಚ್ಚಳ), 7 ಅಥವಾ ಅದಕ್ಕಿಂತ ಎಕ್ಸೆಲ್ ವಾಹನಗಳು 1,080 ರೂ. (200 ರೂ. ಹೆಚ್ಚಳ), ದ್ವಿಮುಖ ಸಂಚಾರ 1,620 ರೂ. (305 ರೂ. ಹೆಚ್ಚಳ) ಮಾಡಲಾಗಿತ್ತು.










