ಬೆಂಗಳೂರು: 234 ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ…

36
firstsuddi

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಮೂರು ಉಪವಿಭಾಗಗಳ ವ್ಯಾಪ್ತಿಯ ಪೊಲೀಸ್ ಠಾಣೆಗಳ ಅಧಿಕಾರಿಗಳು ರೌಡಿಶೀಟರ್‌ಗಳ ಮನೆಗಳ ಮೇಲೆ ನಿನ್ನೆ ಮುಂಜಾನೆ ಹಠಾತ್​ನೆ ದಾಳಿ ಮಾಡಿದರು. 234 ಮನೆಗಳಲ್ಲಿ ತಪಾಸಣೆ ನಡೆಸಲಾಗಿದ್ದು, 177 ರೌಡಿಗಳು ಮನೆಯಲ್ಲಿರಲಿಲ್ಲ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಎಂಟು ರೌಡಿಗಳ ಮನೆಗಳಲ್ಲೂ ತಪಾಸಣೆ ನಡೆಸಲಾಗಿದೆ.

ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಮುಂಜಾನೆ 5 ಗಂಟೆಯಿಂದ ಬೆಳಗ್ಗೆ 8 ಗಂಟೆವರೆಗೆ ರೌಡಿಗಳ ಮನೆಗಳನ್ನು ಶೋಧಿಸಿದ್ದಾರೆ. ಜಯನಗರ, ಜೆ.ಪಿನಗರ, ಬಸವನಗುಡಿ, ಸಿದ್ದಾಪುರ, ಬನಶಂಕರಿ, ಪುಟ್ಟೇನಹಳ್ಳಿ, ಕುಮಾರಸ್ವಾಮಿ ಲೇಔಟ್, ಸುಬ್ರಹ್ಮಣ್ಯಪುರ, ಕೋಣನಕುಂಟೆ, ತಲಘಟ್ಟಪುರ, ವಿಶ್ವೇಶ್ವಪುರ, ಶಂಕರಪುರ, ಹನುಮಂತನಗರ, ಕೆಂಪೇಗೌಡನಗರ, ಗಿರಿನಗರ, ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 234 ರೌಡಿಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ರೌಡಿಶೀಟರ್‌ಗಳ ಮನೆಗಳಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟಿರುವುದನ್ನು ಖಚಿತಪಡಿಸಿಕೊಳ್ಳಲು ತಪಾಸಣೆ ನಡೆಸಲಾಯಿತು. ಆದರೆ, ಯಾವುದೇ ಶಸ್ತ್ರಾಸ್ತ್ರಗಳು ಪತ್ತೆಯಾಗಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.