ಚಿಕ್ಕಮಗಳೂರು : ಬೇಸಿಗೆ ಶಿಬಿರಗಳಲ್ಲಿ ಮಕ್ಕಳಿಗೆ ನಮ್ಮಸಂಸ್ಕೃತಿ ಮತ್ತು ಸಂಸ್ಕಾರವನ್ನು ಕಲಿಸುವ ಕೆಲಸವಾಗಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಜಗದೀಶಾಚಾರ್ ಸಲಹೆ ಮಾಡಿದರು.
ಭಾರತ ಸೇವಾದಳದ ಜ್ಞಾನಜ್ಯೋತಿ ಘಟಕ ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಆಯೋಜಿಸಿರುವ ಉಚಿತ ಬೇಸಿಗೆ ಶಿಬಿರಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಪಾಶ್ಚಾತ್ಯ ಸಂಸ್ಕೃತಿಗೆ ಮತ್ತು ಆಧುನಿಕತೆಗೆ ಮಾರು ಹೋಗಿರುವ ಪೋಷಕರು ಮನೆಯಲ್ಲಿ ಮಕ್ಕಳಿಗೆ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕಲಿಸುತ್ತಿಲ್ಲ, ಆಧುನಿಕ ಶಿಕ್ಷಣ ಪದ್ದತಿಯಿಂದಾಗಿ ಶಾಲೆಗಳಲ್ಲೂ ಅವುಗಳನ್ನು ಬೆಳೆಸಲಾಗುತ್ತಿಲ್ಲ ಇದರಿಂದಾಗಿ ವಿನಯ, ವಿಧೇಯತೆ ಯಾವುದೂ ಇಲ್ಲದೆ ಮಕ್ಕಳು ಸ್ವೇಚ್ಚಾಚಾರಿಗಳಾಗುತ್ತಿದ್ದಾರೆ ಎಂದು ವಿಷಾದಿಸಿದರು.
ಈ ಹಿನ್ನೆಲೆಯಲ್ಲಿ ಕನಿಷ್ಠ ಬೇಸಿಗೆ ಶಿಬಿರಗಳಲ್ಲಾದರೂ ನಮ್ಮ ಸಂಸ್ಕೃತಿ, ನಮ್ಮ ಸಂಸ್ಕಾರವನ್ನು ಮಕ್ಕಳಲ್ಲಿ ಬಿತ್ತಬೇಕು, ವಿನಯ, ವಿಧೇಯತೆ, ಶಿಸ್ತು, ದೇಶಾಭಿಮಾನವನ್ನು ಅವರಲ್ಲಿ ಬೆಳೆಸಬೇಕು, ಮರೆಯಾಗುತ್ತಿರುವ ದೇಶೀಯ ಕ್ರೀಡೆಗಳನ್ನು ಕಲಿಸಬೇಕು ಎಂದು ಕಿವಿಮಾತು ಹೇಳಿದರು.
ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಹಂಪಯ್ಯ ಮಾತನಾಡಿ ಶಿಬಿರದಲ್ಲಿ ಮಕ್ಕಳು ಆಸಕ್ತಿಯಿಂದ ಕಲಿತು ಉತ್ತಮ ನಾಗರೀಕರಾಗಿ ಹೊರಹೊಮ್ಮಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಬಿರದ ವ್ಯವಸ್ಥಾಪಕ ಎಸ್.ಇ.ಲೋಕೇಶ್ವರಾಚಾರ್ ಕಳೆದ 30 ವರ್ಷಗಳಿಂದ ಸಂಪೂರ್ಣ ಉಚಿತವಾಗಿ ಬೇಸಿಗೆ ಶಿಬಿರ ನಡೆಸಲಾಗುತ್ತಿದ್ದು, ಭಾಗವಹಿಸುವ ಮಕ್ಕಳಿಗೆ ಯೋಗ, ಪ್ರಾಣಾಯಾಮ, ಕ್ರೀಡೆ, ಆರೋಗ್ಯ, ನೈತಿಕ ಶಿಕ್ಷಣ, ಭಾವೈಕ್ಯತೆ, ದೇಶಭಕ್ತಿ ಸೇರಿದಂತೆ ಹಲವು ಆಯಾಮಗಳ ಬಗ್ಗೆ ತಜ್ಞರಿಂದ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕಿ ಬಿ.ಆರ್.ಗೀತಾ ಶಿಬಿರದಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಪ್ರತಿದಿನ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹೇಶ್ವರಪ್ಪ, ಭಾರತ ಸೇವಾದಳದ ಜಿಲ್ಲಾ ಸಂಘಟಕ ಚಂದ್ರಕಾಂತ್ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಬೇಸಿಗೆ ಶಿಬಿರಗಳಲ್ಲಿ ಮಕ್ಕಳಿಗೆ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕಲಿಸುವ ಕೆಲಸವಾಗಬೇಕು :...










