ಚಿಕ್ಕಮಗಳೂರು : ಹಿರೇಮಗಳೂರಿನಲ್ಲಿ ಗ್ರಾಮ ದೇವತೆಗಳ ವಾರ್ಷಿಕ ಸಿಡಿ ಉತ್ಸವ…

235
firstsuddi

ಚಿಕ್ಕಮಗಳೂರು : ನಗರ ಹೊರವಲಯದ ಹಿರೇಮಗಳೂರಿನಲ್ಲಿ ಗ್ರಾಮ ದೇವತೆಗಳಾದ ಶ್ರೀ ಕರಾಳಮ್ಮ, ಅಂತರಘಟ್ಟಮ್ಮ ಮತ್ತು ಪ್ಲೇಗಿನಮ್ಮನವರ ವಾರ್ಷಿಕ ಸಿಡಿ ಉತ್ಸವ ಸಹಸ್ರಾರು ಭಕ್ತರ ನಡುವೆ ಇಂದು ವೈಭವದಿಂದ ನಡೆಯಿತು.
ಉತ್ಸವದ ಪ್ರಯುಕ್ತ ಕಲಾವೃದ್ದಿ ಹೋಮ, ಕುಂಭಾಬಿಷೇಕ, ಶ್ರೀ ದುರ್ಗಾ, ಲಕ್ಷ್ಮೀ, ಸರಸ್ವತಿ ಮತ್ತು ಚಂಡಿಕಾ ಮೂಲಮಂತ್ರ ಹೋಮ, ವಿಶೇಷ ಪೂಜೆ, ಅಲಂಕಾರ, ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು, ಭಾರ್ಗವಪುರಿ ಶ್ರೀ ಕೋದಂಡರಾಮನಿಗೆ ಫಲ ಸಮರ್ಪಿಸಲಾಯಿತು.
ಸಂಜೆ ವೇಳೆಗೆ ಶ್ರೀ ಕರಾಳಮ್ಮ, ಅಂತರಘಟ್ಟಮ್ಮ ಮತ್ತು ಪ್ಲೇಗಿನಮ್ಮನವರ ಉತ್ಸವ ಮೂರ್ತಿಗಳನ್ನು ದೇವಾಲಯದಿಂದ ಹೊರತಂದು ನಾದಸ್ವರ, ಚಾಮ, ಕೆಂಚರಾಯ, ಕೊಂಬು, ಕಹಳೆ ಸೇರಿದಂತೆ ಗ್ರಾಮೀಣ ವಾದ್ಯಗಳು ಮತ್ತು ಬೆಳ್ತಂಗಡಿಯ ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಮನೆಗಳ ಮುಂದೆ ಸಾರಿಸಿ ರಂಗವಲ್ಲಿ ಹಾಕಿ ಗ್ರಾಮಸ್ಥರು ಉತ್ಸವ ಮೂರ್ತಿಯನ್ನು ಸ್ವಾಗತಿಸಿ ಪೂಜೆ ಸಲ್ಲಿಸಿದರು, ನಂತರ ಗ್ರಾಮದ ಮುಂಭಾಗದ ಅಂತರಘಟ್ಟಮ್ಮನವರ ದೇವಾಲಯದ ಬಳಿ ಸಾಲಂಕೃತಗೊಂಡು ಸಜ್ಜಾಗಿ ನಿಂತಿದ್ದ ಸಿಡಿಗಂಬಕ್ಕೆ ಮತ್ತು ಪಂಚ ಭೂತಗಳಿಗೆ ಪೂಜೆ ಸಲ್ಲಿಸಲಾಯಿತು.
ನಂತರ ಉತ್ಸವ ಮೂರ್ತಿಗಳನ್ನು ಸಿಡಿಗಂಭದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು, ಇದೇ ವೇಳೆ ಭಕ್ತರು ಮಕ್ಕಳನ್ನು ಸಿಡಿಗಂಭದಲ್ಲಿ ಕುಳ್ಳಿರಿಸಿ ಹರಕೆ ಸಲ್ಲಿಸಿದರು, ಉತ್ಸವದ ಪ್ರಯುಕ್ತ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು.
ದೇವಾಲಯ ಸಮಿತಿಯ ಅಧ್ಯಕ್ಷ ಸಿ.ಪಿ.ರವಿಶಂಕರ್, ಕಾರ್ಯದರ್ಶಿ ಡಿ.ಎಂ.ಶಂಕರ್, ಅರ್ಚಕ ಹೆಚ್.ಕೆ.ಶ್ರೀಧರ್, ನಗರಸಭೆ ಮಾಜಿ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.