ಭಜರಂಗದಳ ಕಾರ್ಯಕರ್ತರಿಂದ ನೈತಿಕ ಪೊಲೀಸ್ ಗಿರಿ- 7 ಮಂದಿ ಆರೋಪಿಗಳಿಗೆ 13 ದಿನಗಳ ಕಾಲ ನ್ಯಾಯಾಂಗ ಬಂಧನ…

38
firstsuddi

ಚಿಕ್ಕಮಗಳೂರು: ಲವ್ ಜಿಹಾದ್ ಆರೋಪಿಸಿ ನೈತಿಕ ಪೊಲೀಸ್ ಗಿರಿ ನಡೆಸಿದ್ದ ಆರೋಪದ ಮೇರೆಗೆ ಹಿಂದೂಪರ ಸಂಘಟನೆಯ 7 ಮಂದಿ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಜಿಲ್ಲೆಯ ಆಲ್ದೂರು ತಾಲೂಕಿನ ಆಲ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಅಪ್ರಾಪ್ತ ಬಾಲಕಿಯ ಜೊತೆ ಸುತ್ತಾಡುತ್ತಿದ್ದ ಮುಸ್ಲಿಂ ಯುವಕನ ಮೇಲೆ ಭಜರಂಗದಳ ಕಾರ್ಯಕರ್ತರು ನೈತಿಕ ಪೊಲೀಸ್ ಗಿರಿ ನಡೆಸಿದ್ದರು. ಈ ಹಿನ್ನಲೆ 7 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಜರಂಗದಳ ಜಿಲ್ಲಾ ಘಟಕದ ಸಂಚಾಲಕ ಶಿವಕುಮಾರ್ ಸ್ವರೂಪ್, ಕಾರ್ತಿಕ್ ಸೇರಿ 7 ಮಂದಿ ಆರೋಪಿಗಳಿಗೆ 13 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಚಿಕ್ಕಮಗಳೂರು ನಗರದ ಜೆಎಂಎಫ್‍ಸಿ ನ್ಯಾಯಾಲಯ ಆದೇಶಿಸಿದೆ.

ಘಟನೆಯ ಹಿನ್ನಲೆ:-
ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಗಾಳಿಗಂಡಿ ನಿವಾಸಿಯಾದ ರೂಮನ್ , ಉಜಿರೆಯ ಖಾಸಗಿ ಕಾಲೇಜಿನಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಇತ ಅಪ್ರಾಪ್ತ ಬಾಲಕಿಯ ಜೊತೆ ಸುತ್ತಾಡುತ್ತಿದ್ದು, ಆಕೆಯ ಜೊತೆ ರೂಮನ್ ಇರುವ ಫೋಟೋಸ್ ಹಾಗೂ ವೀಡಿಯೋಗಳು ವೈರಲ್ ಆಗಿದ್ದವು. ಇದರ ಬೆನ್ನಲ್ಲೇ ಭಜರಂಗದಳ ಕಾರ್ಯಕರ್ತರು, ನಿನ್ನೆ ರಾತ್ರಿ ರೂಮನ್​ನನ್ನು ಆಲ್ದೂರಿಗೆ ಕರೆಸಿಕೊಂಡು ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ್ದರು. ಘಟನೆ ಸಂಬಂಧ ರೂಮನ್ ದೂರು ದಾಖಲಿಸಿದ್ದ. ಮತ್ತೊಂದೆಡೆ ಡ್ಯಾನ್ಸ್ ಮಾಸ್ಟರ್ ರೂಮನ್ ವಿರುದ್ಧ ಕೂಡ ಅಪ್ರಾಪ್ತ ಬಾಲಕಿಯ ಪೋಷಕರು ದೂರು ದಾಖಲಿಸಿದ್ದರು. ಬಳಿಕ ಆಲ್ದೂರು ಪೊಲೀಸ್ ಠಾಣೆಯಲ್ಲಿ ರೂಮನ್ ಮತ್ತು ಭಜರಂಗದಳ ಕಾರ್ಯಕರ್ತರ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು.

ಇನ್ನು ಡ್ಯಾನ್ಸ್ ಮಾಸ್ಟರ್ ರೂಮನ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾದರೆ, ಇತ್ತ ಬಂಧನಕ್ಕೋಳಗಾಗಿದ್ದ 7 ಜನ ಭಜರಂಗದಳ ಕಾರ್ಯಕರ್ತರನ್ನು 13 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶಿಸಿದೆ. ಈ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಆಲ್ದೂರು ಪಟ್ಟಣದಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.