ಭಾರತದ ಅಳಿಯನಿಗೆ ಬ್ರಿಟನ್ ಪ್ರಧಾನಿ ಪಟ್ಟ – ರಿಷಿ ಸುನಕ್‍ಗೆ ಅಭಿನಂದನೆ ಸಲ್ಲಿಸಿದ ಮೋದಿ, ಬೊಮ್ಮಾಯಿ, ಹೆಚ್‍ಡಿಕೆ.

37
firstsuddi

ನವದೆಹಲಿ/ಬೆಂಗಳೂರು: ಭಾರತ ಮೂಲದ ರಿಷಿ ಸುನಾಕ್ ಬ್ರಿಟನ್ ನ ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ರಿಷಿ ಸುನಾಕ್ ಅವರು ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವರ ಅಳಿಯ.

ರಿಷಿ ಸುನಕ್ ಗೆ 193 ಸಂಸದರು ಬೆಂಬಲ ನೀಡಿದ್ದರು. ಕೇವಲ 26 ಸಂಸದರ ಬೆಂಬಲ ಹೊಂದುವ ಮೂಲಕ ಪ್ರತಿಸ್ಪರ್ಧಿಯಾಗಿ ಪನ್ನಿ ಮೊರ್ಡಾಂಟ್ ರೇಸ್ ನಿಂದ ಹಿಂದೆ ಸರಿದ ಕಾರಣ ರಿಷಿ ಸುನಕ್ ಪ್ರಧಾನಿ ಹುದ್ದೆಗೆ ಏರಿದರು. ಇದಕ್ಕೂ ಮೊದಲು ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.

ಬ್ರಿಟನ್ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿರುವ ರಿಷಿ ಸುನಕ್‍ಗೆ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಶುಭಾಶಯ ತಿಳಿಸಿದ್ದಾರೆ.

ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ ರಿಷಿ ಸುನಕ್ ಅವರಿಗೆ ಅಭಿನಂದನೆ. ಭಾರತ-ಬ್ರಿಟನ್ ಒಗ್ಗೂಡಿ ಜಾಗತಿಕ ಸಮಸ್ಯೆಗಳು ಹಾಗೂ 2030ರ ವರೆಗೆ ಜಾರಿಗೊಳಿಸುವ ಯೋಜನೆಗಳಿಗೆ ಕ್ರಿಯಾಯೋಜನೆ ರೂಪಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸುವ ಉದ್ದೇಶವಿದೆ. ಹಾಗೇ ನಮ್ಮ ಐತಿಹಾಸಿಕ ಒಪ್ಪಂದಗಳು ಆಧುನಿಕ ಸಹಭಾಗಿತ್ವವಾಗಿ ಮಾರ್ಪಾಡಾಗಲಿ ಎಂದು ಮೋದಿ ಟ್ವೀಟ್ ಮಾಡಿ ಬ್ರಿಟನ್ ನಲ್ಲಿರುವ ಎಲ್ಲಾ ಭಾರತೀಯರಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಭಾರತೀಯ ಮೂಲದ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿ ಆಯ್ಕೆ ಆಗಿದ್ದಕ್ಕೆ ಸಂತಸ, ಹೆಮ್ಮೆ ಆಗ್ತಿದೆ. ಬ್ರಿಟಿಷರು ಭಾರತವನ್ನು 200 ವರ್ಷಗಳ ಕಾಲ ಆಳಿದ್ದರು. ಭಾರತೀಯ ಮೂಲದವರು ಪ್ರಧಾನಿ ಆಗ್ತಾರೆಂದು ನಿರೀಕ್ಷಿಸಿರಲಿಲ್ಲ. ಕನಸು, ಮನಸ್ಸಿನಲ್ಲೂ ನಿರೀಕ್ಷಿಸಿರಲಿಲ್ಲ, ಈಗ ಕಾಲ ಚಕ್ರ ತಿರುಗಿದೆ. ಬ್ರಿಟನ್ ನಲ್ಲಿ ಭಾರತೀಯರು ಎಲ್ಲಾ ರಂಗಗಳಲ್ಲೂ ಮುಂದಿದ್ದಾರೆ. ಈಗ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಆಗಿರೋದು ವಿಶೇಷ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮಾಡಿದ್ದಾರೆ.

ಟ್ವೀಟ್ ಮಾಡಿ ರಿಷಿ ಸುನಕ್ ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಶುಭಾಶಯ ಕೋರಿದ್ದು, ಕನ್ಸರ್ವೇಟಿವ್ ಪಕ್ಷದ ನಾಯಕರಾಗಿದ್ದಕ್ಕೆ ರಿಷಿ ಸುನಕ್ ಗೆ ಅಭಿನಂದನೆ. ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರಾದ ನಾರಾಯಣ ಮೂರ್ತಿ-ಸುಧಾಮೂರ್ತಿ ಅಳಿಯ ಸುನಕ್ ಆಯ್ಕೆ ಅತೀವ ಸಂತಸ ತಂದಿದೆ. ಆರ್ಥಿಕ ಸಂಕಷ್ಟ ಕಾಲದಲ್ಲಿ ಬ್ರಿಟನ್ ಚುಕ್ಕಾಣಿ ಹಿಡಿಯುತ್ತಿದ್ದಾರೆ. ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಾರೆಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.