ಭಾರತೀಯ ಗರ್ಭಿಣಿ ಸಾವು ; ರಾಜೀನಾಮೆ ನೀಡಿದ ಪೋರ್ಚುಗಲ್‍ನ ಆರೋಗ್ಯ ಸಚಿವೆ.

45
firstsuddi

ಲಿಸ್ಬನ್ : ಭಾರತದ ಗರ್ಭಿಣಿ ಪ್ರವಾಸಿಗರೊಬ್ಬರು ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಪೋರ್ಚುಗಲ್‍ನ ಆರೋಗ್ಯ ಸಚಿವೆ ಮಾರ್ಟಾ ಟೆಮಿಡೊ ರಾಜೀನಾಮೆ ನೀಡಿದ್ದಾರೆ.

ತುರ್ತು ಪ್ರಸೂತಿ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರಿಂದಾಗಿ ಹಾಸಿಗೆಯ ಕೊರತೆ ಉಂಟಾಗಿತ್ತು. ಇದರಿಂದಾಗಿ 34 ವರ್ಷದ ಭಾರತೀಯ ಗರ್ಭಿಣಿಯನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸುವ ಸಮಯದಲ್ಲಿ ಸಾವನ್ನಪ್ಪಿದ್ದರು. ಭಾರತದ ಗರ್ಭಿಣಿ ಮೃತಪಟ್ಟ ಸುದ್ದಿ ವ್ಯಾಪಕ ಆಕ್ರೋಶಕ್ಕೆ ಗುರಿಯಾದ ಕೆಲವೇ ಗಂಟೆಗಳಲ್ಲಿ ಟೆಮಿಡೊ ಅವರು ರಾಜೀನಾಮೆ ಸಲ್ಲಿಸಿದ್ದಾರೆ.

ಆರೋಗ್ಯ ಸಚಿವಾಲಯದ ಹುದ್ದೆಯಲ್ಲಿ ಮುಂದುವರಿಯಲು ತಾವು ಸೂಕ್ತ ಪರಿಸ್ಥಿತಿಯಲ್ಲಿ ಇಲ್ಲ ಎಂದು ಟೆಮಿಡೊ ತಿಳಿಸಿದ್ದಾರೆ. ಅವರ ರಾಜೀನಾಮೆಯನ್ನು ಪ್ರಧಾನಿ ಆಂಟೋನಿಯಾ ಕೋಸ್ಟಾ ಸ್ವೀಕರಿಸಿದ್ದಾರೆ.

ಭಾರತದ 34 ಗರ್ಭಿಣಿ ಪ್ರವಾಸಿಗರೊಬ್ಬರಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಕಾರಣ ಅವರನ್ನು ಡಿ ಸಾಂಟಾ ಮರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆಕೆಯ ಆರೋಗ್ಯ ಸ್ಥಿತಿಯನ್ನು ಸ್ಥಿರಗೊಳಿಸಲಾಯಿತು. ಆದರೆ ನವಜಾತ ಶಿಶು ಸೇವೆಯಲ್ಲಿ ಜಾಗ ಇಲ್ಲದಿದ್ದರಿಂದ ಸಾವೊ ಫಾನ್ಸಿಸ್ಕೋ ಕ್ಸೇವಿಯರ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದರೆ ಮಾರ್ಗಮಧ್ಯೆ ಆಕೆ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ.

ಆಕೆಯ ಮಗುವನ್ನು ತುರ್ತು ಸಿಸೇರಿಯನ್ ನಂತರ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತುರ್ತು ಆರೈಕೆ ಸೇವೆಗಳ ಸ್ಥಗಿತ, ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಮತ್ತು ಸೂಕ್ತ ರಾಷ್ಟ್ರೀಯ ಆರೋಗ್ಯ ಸೇವೆಯ ಸ್ಪಂದನೆಯ ಕೊರತೆ ಕಾರಣದಿಂದ ಗರ್ಭಿಣಿಯರು ಸಂಕಷ್ಟಕ್ಕೆ ಒಳಗಾಗುತ್ತಿರುವ ಘಟನೆಗಳು ಪೋರ್ಚುಗಲ್ ನಲ್ಲಿ ನಿರಂತರವಾಗಿ ವರದಿಯಾಗುತ್ತಿದ್ದು, ಇದಕ್ಕೆ ಸಚಿವೆ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.