ಮುರುಘಾ ಶ್ರೀಗಳ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ…

46
firstsuddi

ಚಿತ್ರದುರ್ಗ : ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಡಾ.ಶಿವಮೂರ್ತಿ ಸ್ವಾಮೀಜಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯ ನಾಳೆಗೆ ಮುಂದೂಡಿದೆ.

ನಾಳೆ ಆಕ್ಷೇಪಣೆ ಸಲ್ಲಿಸಲು ಕೋರ್ಟ್ ಅವಕಾಶ ನೀಡಿದೆ. ಈ ಸಂಬಂಧ ಸರ್ಕಾರಿ ಅಭಿಯೋಜಕರಿಗೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ. ನಿರೀಕ್ಷಣಾ ಜಾಮೀನು ಕೋರಿ ಮುರುಘಾ ಶ್ರೀ ಪರವಾಗಿ ವಕೀಲ ಕೆ.ಎನ್.ವಿಶ್ವನಾಥಯ್ಯ ಅವರು ಆ.29ರಂದು ಅರ್ಜಿ ಸಲ್ಲಿಸಿದ್ದರು.

ಮುರುಘಾಮಠ ರಾಜ್ಯದ ಪ್ರತಿಷ್ಠಿತ ಮಠವಾಗಿದ್ದು, ಶ್ರೀಗಳ ಮೇಲೆ ಲೈಂಗಿಕದೌರ್ಜನ್ಯ ಆರೋಪ ಬಂದಿದೆ. ಸೂಕ್ತ ತನಿಖೆ ನಡೆಯುತ್ತಿಲ್ಲವೆಂಬ ಮಾತಿದೆ. ಇದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಎಡೆಮಾಡಿದೆ. ಹಾಗಾಗಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ಹಿಂದೂಸ್ತಾನ ಜನತಾ ಪಾರ್ಟಿ ಆಗ್ರಹ ಮಾಡಿದೆ.

ಇತ್ತ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸುಮೋಟೋ ಕೇಸ್ ದಾಖಲಿಸಿಕೊಂಡಿದೆ. ಏಳು ದಿನಗಳ ಒಳಗಾಗಿ ತನಿಖಾ ವರದಿಯನ್ನು ನೀಡುವಂತೆ ಚಿತ್ರದುರ್ಗ ಎಸ್ ಪಿ ಪರಶುರಾಮ್ ಅವರಿಗೆ ಸೂಚನೆ ನೀಡಿದೆ.

ಇನ್ನು ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮುರುಘಾ ಶ್ರೀಗಳ ವಿರುದ್ಧ ಅಟ್ರಾಸಿಟಿ ದೂರು ಕೂಡ ದಾಖಲಾಗಿದೆ. ನೊಂದ ಇಬ್ಬರ ಪೈಕಿ ಒಬ್ಬಳು ಪರಿಶಿಷ್ಟ ಜಾತಿಗೆ ಸೇರಿದವಳಾದ ಕಾರಣ ಶ್ರೀಗಳ ವಿರುದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ (ಅಟ್ರಾಸಿಟಿ) ಪ್ರಕರಣ ದಾಖಲಾಗಿದೆ. ಈಗಾಗಲೇ ಇಬ್ಬರು ಅಪ್ರಾಪ್ತ ಬಾಲಕಿಯರು ನೀಡಿದ ದೂರಿನ ಮೇರೆ ಶ್ರೀಗಳ ವಿರುದ್ಧ ಅತ್ಯಾಚಾರ, ಪೋಕ್ಸೋ ಕಾಯ್ದೆಯ ಅಡಿ ಕೇಸ್ ದಾಖಲಾಗಿದೆ.