ಲಂಡನ್ : 42ನೇ ವಯಸ್ಸಿನಲ್ಲೇ ರಿಷಿ ಸುನಕ್ ಭಾರತ ಮೂಲದ ಬ್ರಿಟನ್ ನ ಮೊದಲ ಪ್ರಧಾನಿ ಹಾಗೂ ಮೊದಲ ಹಿಂದೂ ಪ್ರಧಾನಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಇನ್ನೂ ವಿಶೇಷ ಎಂದರೆ ಸುನಕ್, ಯುನೈಟೆಡ್ ಕಿಂಗ್ಡಮ್ ನ ರಾಜ 3ನೇ ಕಿಂಗ್ ಚಾರ್ಲ್ಸ್ ಗಿಂತ ಶ್ರೀಮಂತರಾಗಿದ್ದಾರೆ.
ಪ್ರಧಾನ ಮಂತ್ರಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಅವರ ಒಟ್ಟು ಸಂಪತ್ತು 730 ಮಿಲಿಯನ್ ಪೌಂಡ್ (6,919 ಕೋಟಿ) ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. ಇದು ಕಿಂಗ್ 3ನೇ ಚಾರ್ಲ್ಸ್ ಮತ್ತು ರಾಣಿ ಪತ್ನಿ ಕ್ಯಾಮಿಲ್ಲಾ ಅವರ (300 ಮಿಲಿಯನ್ ಪೌಂಡ್) ಸಂಪತ್ತಿಗಿಂತಲೂ ದುಪ್ಪಟ್ಟು ಎನ್ನಲಾಗಿದೆ.
ಸುನಕ್ 1980 ರಲ್ಲಿ ಸೌತಾಂಪ್ಟನ್ ನಲ್ಲಿ ಜನಿಸಿದರು. ಅವರ ಅಜ್ಜಿ ಭಾರತದ ಪಂಜಾಬ್ ನಿಂದ ಬಂದವರು ಮತ್ತು 1960 ರ ದಶಕದಲ್ಲಿ ಪೂರ್ವ ಆಫ್ರಿಕಾದಲ್ಲಿ ಭಾರತೀಯರ ವಿರುದ್ಧ ತೊಂದರೆಯುಂಟಾದಾಗ ಪೂರ್ವ ಆಫ್ರಿಕಾದಿಂದ ಬ್ರಿಟನ್ ಗೆ ವಲಸೆ ಹೋಗಿದ್ದರು. ಅವರು ಖಾಸಗಿ ಬೋರ್ಡಿಂಗ್ ಶಾಲೆ, ವಿಂಚೆಸ್ಟರ್ ಕಾಲೇಜ್ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದರು.
ರಿಷಿ ಸುನಕ್ ಕರ್ನಾಟಕದ ಅಳಿಯ. ಇನ್ಫೋಸಿಸ್ ಸ್ಥಾಪಕ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ದಂಪತಿ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ವರಿಸಿದ್ದಾರೆ. ಸುನಾಕ್ ಅವರು ಕ್ಯಾಲಿಫೋರ್ನಿಯಾದಲ್ಲಿ ಅಧ್ಯಯನ ನಡೆಸುತ್ತಿದ್ದ ವೇಳೆ ಅಕ್ಷತಾ ಮೂರ್ತಿಯವರನ್ನು ಭೇಟಿಯಾಗಿದ್ದರು. ಬಳಿಕ ಬಳಿಕ ಇಬ್ಬರೂ 2009ರಲ್ಲಿ ಮದುವೆಯಾದರು. ಸುನಕ್ ಹಾಗೂ ಅಕ್ಷತಾ ಮೂರ್ತಿ ದಂಪತಿಗೆ ಕೃಷ್ಣ ಹಾಗೂ ಅನುಷ್ಕಾ ಎಂಬ ಇಬ್ಬರು ಪುತ್ರಿಯರಿದ್ದಾರೆ.
ಸುನಕ್ ಮೊದಲ ಬಾರಿಗೆ ಮೇ 2015 ರಲ್ಲಿ (ರಿಚ್ಮಂಡ್, ಯಾರ್ಕ್ಸ್ ನ) ಸಂಸದರಾದರು. ಅಕ್ಟೋಬರ್ 2022 ರಲ್ಲಿ ಬ್ರಿಟನ್ ಪ್ರಧಾನ ಮಂತ್ರಿಯಾದರು. 7 ವರ್ಷಗಳ ಅವಧಿಯಲ್ಲಿ ಬಹುಬೇಗ ಪ್ರಧಾನಿ ಹುದ್ದೆಗೇರಿದ ವ್ಯಕ್ತಿ ಎನಿಸಿಕೊಂಡಿದ್ದಾರೆ. ಈ ನಡುವೆ ಖಜಾನೆಯ ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರ ಸಂಪುಟದಲ್ಲಿ ಹಣಕಾಸು ಸಚಿವರೂ ಆಗಿದ್ದರು.