ಭಿಕ್ಷೆ ಬೇಡಿ ಒಂದು ಲಕ್ಷ ಹಣವನ್ನು ದೇವಸ್ಥಾನದ ಅನ್ನದಾನಕ್ಕೆ ದಾನ ನೀಡಿದ ವೃದ್ಧೆ ಅಶ್ವತಮ್ಮ !

180
First Suddi

ಉಡುಪಿ: ಕುಂದಾಪುರದ ಗಂಗೊಳ್ಳಿ ನಿವಾಸಿಯಾಗಿರುವ ಅಯ್ಯಪ್ಪ ಭಕ್ತೆಯಾದ ವ್ರತಧಾರಿ ವೃದ್ಧೆ ಅಶ್ವತಮ್ಮ ಅವರು ಕರಾವಳಿಯ ನಾನಾ ದೇವಸ್ಥಾನಗಳ ಆವರಣಗಳಲ್ಲಿ ಮತ್ತು ಟೋಲ್ಗೇಟ್ ನಲ್ಲಿ ಜನರಿಂದ ಹಣವನ್ನು ಸಂಗ್ರಹಿಸುತ್ತಿದ್ದರು. ಮಾಮೂಲಾಗಿ ಭಿಕ್ಷುಕರಿಗೆ ನೀಡುವಂತೆ ಈಕೆಗೂ ಎಲ್ಲರೂ ಹಣ ನೀಡುತ್ತಾರೆ.ಹೀಗೆ ಸಂಗ್ರಹವಾದ ಹಣದಲ್ಲಿ ಈಕೆ ಸುಮಾರು ಐದು ಲಕ್ಷಕ್ಕೂ ಅಧಿಕ ಹಣವನ್ನು ವಿವಿಧ ದೇವಾಲಯಗಳಿಗೆ ದಾನವಾಗಿ ಕೊಟ್ಟಿದ್ದಾರೆ.

ಮೊದಲು ತನ್ನೂರು ಕಂಚುಗೋಡುವಿನಲ್ಲಿರುವ ದೇವಸ್ಥಾನಕ್ಕೆ 1.5ಲಕ್ಷ ರೂ. ದೇಣಿಗೆಯೊಂದಿಗೆ ಈ ದಾನ ಪ್ರಕ್ರಿಯೆಯನ್ನು ಆರಂಭಮಾಡಿದರು. ನಂತರ ಶಬರಿಮಲೆಯ ಪಂಪಾ ಕ್ಷೇತ್ರದಲ್ಲಿ 1ಲಕ್ಷ ರೂ. ವೆಚ್ಚದಲ್ಲಿ ಅನ್ನದಾನ ಮಾಡಿದ್ದಾರೆ.. ಅಯ್ಯಪ್ಪ ಸ್ವಾಮಿ ಬೆಳೆದ ಸ್ಥಳವಾದ ಪಂದಳ ಕ್ಷೇತ್ರದಲ್ಲಿ 30ಸಾವಿರ ರೂ. ವೆಚ್ಚದಲ್ಲಿ ಅನ್ನದಾನ ಮಾಡಿದ್ದಾರೆ. ಇತ್ತೀಚೆಗೆ ಜೀರ್ಣೋದ್ಧಾರಗೊಂಡ ದಕ್ಷಿಣ ಕನ್ನಡ ಜಿಲ್ಲೆಯ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನಕ್ಕೂ 1.5ಲಕ್ಷ ರೂ.ಗಳನ್ನು ಕಾಣಿಕೆ ಸಮರ್ಪಿಸಿದ್ದಾರೆ. ಗುರುವಾರ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನಕ್ಕೆ 1ಲಕ್ಷ ರೂ.ಗಳನ್ನು ಭೋಜನ ನಿಧಿಗೆ ಸಮರ್ಪಿಸಿದ್ದಾರೆ. ತನ್ನ ವೈಯಕ್ತಿಕ ಖರ್ಚಿಗೆ ಸ್ವಲ್ಪ ಹಣ ಇರಿಸಿಕೊಂಡು ಉಳಿದೆಲ್ಲವನ್ನು ಈಕೆ ದಾನ ಮಾಡುತ್ತಾ ಬಂದಿದ್ದಾರೆ.
 

ಈಕೆಯ ಪತಿ ಹಾಗೂ ಪುತ್ರ ತೀರಿಕೊಂಡ ನಂತರ ಈಕೆ ಈ ಹಣ ಸಂಗ್ರಹ ಕೆಲಸವನ್ನು ಆರಂಭಿಸಿದ್ದಾರೆ. ಈಕೆಗೆ ಆರು ಮಂದಿ ಮೊಮ್ಮಕ್ಕಳೂ ಇದ್ದಾರೆ. ದೇವರ ಹೆಸರಲ್ಲಿ ದುಡಿದ ಹಣವನ್ನು ದೇವರಿಗೆ ಸಂದಾಯ ಮಾಡುವ ಈ ವೃದ್ದೆಯ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.