ಭೀಕರ ಅಪಘಾತ – ನಾಲ್ವರು ವಿದ್ಯಾರ್ಥಿಗಳು ದುರ್ಮರಣ…

98
firstsuddi

ದೇವನಹಳ್ಳಿ : ಬೆಳ್ಳಂಬೆಳಗ್ಗೆ ಭೀಕರ ಅಪಘಾತವೊಂದು ಸಂಭವಿಸಿದೆ. ಅತಿ ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಗುದ್ದಿ ಬಳಿಕ ಲಾರಿಗೆ ಡಿಕ್ಕಿಯಾದ ಪರಿಣಾಮ ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಅಟ್ಟೂರು ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ.

ವೈಷ್ಣವಿ, ಭರತ್, ಸಿರಿಲ್, ವೆಂಕಟ್ ಮೃತ ದುರ್ದೈವಿಗಳು. ಮೃತರೆಲ್ಲರೂ ಗಾರ್ಡನ್ ಸಿಟಿ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಇನ್ನೂ ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿಗಳಾದ ಸಿರಿಕೃಷ್ಣ ಮತ್ತು ಅಂಕಿತಾ ರೆಡ್ಡಿ ಸ್ಥಿತಿ ಗಂಭೀರವಾಗಿದ್ದು ಹೊಸಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ವಿದ್ಯಾರ್ಥಿಗಳು  ಕೋಲಾರದ ನರಸಾಪುರ ಬಳಿಯಿರುವ ಕೆಫೆ ಕಾಫಿ ಡೇಗೆ ಲಾಂಗ್ ಡ್ರೈವ್ ಹೋಗಿ ಕೋಲಾರದ ಕಡೆಯಿಂದ ಬೆಂಗಳೂರು ಕಡೆಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಮೊದಲಿಗೆ ರಸ್ತೆ ಮಧ್ಯೆಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಮೇಲಕ್ಕೆ ಹಾರಿದೆ. ನಂತರ ನೂರು ಮೀಟರ್‍ಗೂ ಅಧಿಕ ದೂರ ಹೆದ್ದಾರಿಯಲ್ಲೇ ಪಲ್ಟಿ ಹೊಡೆದು ಬೆಂಗಳೂರು ಕಡೆಯಿಂದ ಕೋಲಾರದ ಕಡೆಗೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ನಂತರ ಹೆದ್ದಾರಿ ಬದಿಯ ಹಳ್ಳಕ್ಕೆ ಬಿದ್ದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಈ ಕುರಿತು ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.