ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಜಿನಕನಹಳ್ಳಿ ಗ್ರಾಮದಲ್ಲಿ ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದ ನಿವಾಸಿಗಳಾದ ಪತಿ ಸಂತೋಷ್(32), ಪತ್ನಿ ಸೌಮ್ಯ(27), ಹೆಣ್ಣು ಮಗು ನಿತ್ಯಸಾಕ್ಷಿ (4), ಮಗ ಅಭಿ (9) ಮೃತ ದುರ್ದೈವಿಗಳು.
ಸಂಕ್ರಾಂತಿ ಹಬ್ಬಕ್ಕೆ ಬಟ್ಟೆ ಖರೀದಿಸಲು ಕೊಳ್ಳೇಗಾಲಕ್ಕೆ ಸಂತೋಷ್ ಕುಟುಂಬ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಜಿನಕನಹಳ್ಳಿ ಸಮೀಪ ಭತ್ತ ಕತ್ತರಿಸುವ ಯಂತ್ರಕ್ಕೆ ಇವರು ಪ್ರಯಾಣಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್ನಿಂದ ನಾಲ್ವರು ಕೆಳಗೆ ಬಿದ್ದಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ ಅಭಿಯನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಭಿ ಕೂಡ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಕೊಳ್ಳೆಗಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಕುರಿತು ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










