ಭೀಕರ ರಸ್ತೆ ಅಪಘಾತ – ಒಂದೇ ಕುಟುಂಬದ ಮೂವರ ದುರ್ಮರಣ…

55
firstsuddi

ಶಿವಮೊಗ್ಗ : ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಸಮೀಪದ ಮಂಚಿನಕೊಪ್ಪ ಬಳಿ ನಿನ್ನೆ ತಡರಾತ್ರಿ ನಡೆದಿದೆ.

ಶಿಕಾರಿಪುರ ತಾಲೂಕಿನ ಹಲುಗಿನಕೊಪ್ಪ ಗ್ರಾಮದ ನಿವಾಸಿಗಳಾದ ಜ್ಯೋತಿ (30), ಗಂಗಮ್ಮ (50) ಸೌಜನ್ಯ (4) ಮೃತರು. ಮಲ್ಲಿಕಾರ್ಜುನ, ಮಗಳು ಸೌಜನ್ಯ, ಪತ್ನಿ ಜ್ಯೋತಿ ಹಾಗು ತಾಯಿ ಗಂಗಮ್ಮ ನಾಲ್ಕು ಮಂದಿ ಒಂದೇ ಬೈಕ್ ನಲ್ಲಿ ತೆರಳುತ್ತಿದ್ದರು. ಕಾರು ಹೀರೆಕೆರೂರು ಕಡೆಯಿಂದ ಶಿರಾಳಕೊಪ್ಪ ಕಡೆಗೆ ತೆರಳುತಿತ್ತು. ಈ ವೇಳೆ ಕಾರು-ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮಗು ಸೌಜನ್ಯ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಮಲ್ಲಿಕಾರ್ಜುನ, ಜ್ಯೋತಿ, ಗಂಗಮ್ಮ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಶಿಕಾರಿಪುರ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಗಂಗಮ್ಮ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಜ್ಯೋತಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಗುತಿತ್ತು. ಶಿವಮೊಗ್ಗಕ್ಕೆ ಕರೆದೊಯ್ಯುವ ವೇಳೆ ಜ್ಯೋತಿ ಅಸುನೀಗಿದ್ದಾರೆ. ಮಲ್ಲಿಕಾರ್ಜುನ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಶಿರಾಳಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.