ಮಂಡ್ಯ: ಸಕ್ಕರೆ ನಾಡಿನಲ್ಲಿ ಇಂದಿನಿಂದ 5 ದಿನಗಳ ಕಾಲ ನಡೆಯುವ ಫಲಪುಷ್ಪ ಪ್ರದರ್ಶನ ಹಾಗೂ ಮಧುರ ವಸ್ತ್ರೋತ್ಸವಕ್ಕೆ ಸಚಿವ ಎನ್.ಚಲುವರಾಯಸ್ವಾಮಿ ಅವರು ಚಾಲನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಪಾರ್ಕ್‍ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ. ಉದ್ಯಾನವನದಲ್ಲಿ ಆಕರ್ಷಕ ಬಣ್ಣದ ನಾನಾ ಜಾತಿಯ ಹೂಗಳಿಂದ ಹಲವಾರು ಕಲಾಕೃತಿಗಳು ಅರಳಿ ನಿಂತಿದ್ದು, ಸಾರ್ವಜನಿಕರ ಗಮನ ಸೆಳೆದಿದೆ. ಆಕರ್ಷಕ ಸೆಲ್ಫಿ ಪಾಯಿಂಟ್‍ಗಳಲ್ಲಿ ಪುಷ್ಪ ಪ್ರಿಯರು ಫೋಟೋ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದಾರೆ. ಮತ್ತೊಂದೆಡೆ ಒಂಬತ್ತು ಲಕ್ಷ ವಿವಿಧ ಬಣ್ಣದ ಸೇವಂತಿಗೆ ಮತ್ತು ಗುಲಾಬಿ ಹೂವುಗಳಿಂದ ಪ್ರವಾಸಿ ತಾಣ, ದೇವಾಲಯಗಳ ನಿರ್ಮಾಣವಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ಮತ್ತೊಂದು ಬದಿಯಲ್ಲಿ ವಿವಿಧ ತರಕಾರಿ ಬೆಳೆಗಳು, ಕೈತೋಟ ಆಹಾರ ಬೆಳೆಗಳು ಮತ್ತು ವಿವಿಧ ಅಭಿವೃದ್ಧಿ ಇಲಾಖೆ ಕಾರ್ಯಕ್ರಮಗಳ ಸಮಗ್ರ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತಿದೆ. ಐದು ದಿನಗಳ ಕಾಲ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಈ ವೇಳೆ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ.