ಬೆಂಗಳೂರು : ಮಂತ್ರಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಸುಶೀಲ್ ಪಾಂಡುರಂಗ್ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ನಿನ್ನೆ ಹಾಜರಾಗುವಂತೆ ಇಡಿ ಸಮನ್ಸ್ ಜಾರಿ ಮಾಡಿತ್ತು. ನಿನ್ನೆ ವಿಚಾರಣೆಗೆ ಹಾಜರಾಗಿದ್ದ ಸುಶೀಲ್ ಪಾಂಡುರಂಗ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. ಇಂದು ಅವರನ್ನು ಕೋರ್ಟ್ ಗೆ ಹಾಜರು ಪಡಿಸಿದ್ದು, ನ್ಯಾಯಾಲಯವು 10 ದಿನಗಳ ಕಾಲ ಇಡಿ ವಶಕ್ಕೆ ನೀಡಿದೆ.
ಜನರಿಂದ ಹಣ ಪಡೆದು ಫ್ಲಾಟ್ ಕೊಡದೇ ವಂಚನೆ ಮಾಡಿರುವ ಆರೋಪ ಇವರ ಮೇಲಿತ್ತು. ಈ ಬಗ್ಗೆ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಸಾರ್ವಜನಿಕರು ಇಡಿಗೂ ದೂರು ನೀಡಿದ್ದರು. ತೆರಿಗೆ ವಂಚನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕಳೆದ ವರ್ಷ ಮಂತ್ರಿ ಗ್ರೂಪ್ ಕಟ್ಟಡಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿತ್ತು. ಐಟಿ ದಾಳಿ ವೇಳೆ ಹಲವು ಮಹತ್ವದ ದಾಖಲೆಗಳು ಲಭ್ಯವಾಗಿತ್ತು. ಬಹುತೇಕ ವ್ಯವಹಾರಗಳು ನಗದು ರೂಪದಲ್ಲಿ ನಡೆದಿರುವುದು ಪತ್ತೆಯಾಗಿತ್ತು. ಅಷ್ಟೇ ಅಲ್ಲದೇ ಹವಾಲ ರೂಪದಲ್ಲಿ ಹಣ ವರ್ಗಾವಣೆ ಆಗಿರುವ ಬಗ್ಗೆಯೂ ಬೆಳಕಿಗೆ ಬಂದಿತ್ತು.










