ಮಕ್ಕಳ ಶಿಕ್ಷಣಕ್ಕಾಗಿ ಟಿವಿ ಖರೀದಿಸಲು ತಾಳಿಯನ್ನು ಅಡವಿಟ್ಟ ಮಹಾತಾಯಿ…

144
firstsuddi

ಗದಗ : ಮಹಾಮಾರಿ ಕೊರೊನಾ ವೈರಸ್ ಅಟ್ಟಹಾಸದಿಂದ ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲೇ ಆನ್‍ಲೈನ್ ಶಿಕ್ಷಣದ ಮೂಲಕ ತರಗತಿಯನ್ನು ಕೇಳುವ ಪರಿಸ್ಥಿತಿ ಎದುರಾಗಿದ್ದು, ಇದರಿಂದ ತಾಯಿಯೊಬ್ಬರು ತನ್ನ ಮಕ್ಕಳ ಶಿಕ್ಷಣಕ್ಕಾಗಿ ತನ್ನ ಮಾಂಗಲ್ಯವನ್ನೇ ಅಡವಿಟ್ಟಿರುವ ಘಟನೆ ಜಿಲ್ಲೆಯ ನರಗುಂದ ತಾಲ್ಲೂಕಿನ ನಾಗನೂರಿನಲ್ಲಿ ನಡೆದಿದೆ. ಗ್ರಾಮದ ಕಸ್ತೂರಿ ಎಂಬುವವರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು, ಅವರಿಗೆ 7 ಹಾಗೂ 8ನೇ ತರಗತಿಯಲ್ಲಿ ಓದುವ ಇಬ್ಬರು ಮಕ್ಕಳಿದ್ದಾರೆ. ಕೊರೊನಾ ಸಂಕಷ್ಟದಿಂದಾಗಿ ಶಾಲಾ ಮಕ್ಕಳಿಗೆ ಟಿವಿಯಲ್ಲಿ ತರಗತಿಗಳು ಆರಂಭವಾಗಿರುವ ಹಿನ್ನೆಲೆ, ಪ್ರತಿದಿನ ಶಾಲಾ ಶಿಕ್ಷಕರು ಟಿವಿಯನ್ನು ನೋಡಿ ಪಾಠ ಆಲಿಸಬೇಕು ಎಂದು ಕರೆ ಮಾಡಿ ತಿಳಿಸಿದ್ದರು. ಆದರೆ ಕಸ್ತೂರಿ ಅವರ ಮನೆಯಲ್ಲಿ ಟಿವಿ ಇಲ್ಲದ ಕಾರಣ ಮಕ್ಕಳಿಗೆ ಪಾಠ ಕೇಳಲು ಆಗುತ್ತಿರಲಿಲ್ಲ. ಇದರಿಂದ ಮಕ್ಕಳ ಶಿಕ್ಷಣಕ್ಕೆ ಯಾವುದೇ ಅಡಚಣೆ ಆಗಬಾರದೆಂದು ತನ್ನ ತಾಳಿಯನ್ನು ಅಡವಿಟ್ಟು ಟಿವಿಯನ್ನು ಖರೀದಿಸಿ ಇತರರಿಗೆ ಮಾದರಿಯಾಗಿದ್ದಾರೆ.