ತಿರುವನಂತಪುರಂ : ಮಗಳೊಂದಿಗೆ ನೀಟ್ ಪರೀಕ್ಷೆ ಬರೆಯುವ ಮೂಲಕ ತಂದೆಯೊಬ್ಬರು ಎಂಬಿಬಿಎಸ್ ಸೀಟು ಗಿಟ್ಟಿಸಿಕೊಂಡಿದ್ದಾರೆ.
ಎರ್ನಾಕುಳಂ ಜಿಲ್ಲೆಯ ತ್ರಿಪ್ಪೂಣಿತುರಲ್ಲಿ ನಿವಾಸಿಯಾದ, 54 ವರ್ಷದ ಆರ್. ಮುರುಗಯ್ಯನ್ ಅವರು 18 ವರ್ಷದ ಮಗಳೊಂದಿಗೆ ನೀಟ್ ಪರೀಕ್ಷೆ ಬರೆದು ಎಂಬಿಬಿಎಸ್ ಸೀಟು ಪಡೆದುಕೊಂಡಿದ್ದಾರೆ. ಬಿಪಿಸಿಎಲ್ ಕೊಚ್ಚಿ ರಿಫೈನರಿ ಮುಖ್ಯ ವ್ಯವಸ್ಥಾಪಕರಾಗಿರುವ ಲೆಫ್ಟಿನೆಂಟ್ ಕರ್ನಲ್ ಮುರುಗಯ್ಯನ್, ಮಗಳು ಶೀತಲ್ ಜೊತೆ ಓದಿ ನೀಟ್ ಪರೀಕ್ಷೆಗೆ ಹಾಜರಾಗಿದ್ದರು. ಮುರುಗಯ್ಯನ್ ಅವರಿಗೆ ಚೆನ್ನೈನ ಶ್ರೀಲಲಿತಾಂಬಿಕಾ ವೈದ್ಯಕೀಯ ಕಾಲೇಜಿನಲ್ಲಿ, ಪುತ್ರಿ ಶೀತಲ್ ಅವರಿಗೆ ಪಾಂಡಿಚೇರಿಯ ವಿನಾಯಕ ಮಿಷನ್ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸಿಕ್ಕಿದೆ.
ಗರಿಷ್ಠ ವಯೋಮಿತಿ ಇಲ್ಲದೆ ಯಾರು ಬೇಕಾದರೂ ನೀಟ್ ಪರೀಕ್ಷೆಗೆ ಹಾಜರಾಗಬಹುದು ಎಂಬ ಸುಪ್ರೀಂಕೋರ್ಟ್ ತೀರ್ಪಿನೊಂದಿಗೆ ಮುರುಗಯ್ಯನವರ ಡಾಕ್ಟರ್ ಆಗುವ ಆಸೆ ಚಿಗುರಿತ್ತು. ರಿಫೈನರಿಯಲ್ಲಿ ಕೆಲಸ ಮುಗಿಸಿ ಬಂದು ಮುರುಗಯ್ಯನವರು ಮಗಳ ಜೊತೆ ನೀಟ್ ಪರೀಕ್ಷೆಗೆ ತಯಾರಿಮಾಡುತ್ತಿದ್ದರು. ಪತ್ನಿ ಮಾಲತಿ ಅವರಿಗೆ ಸಂಪೂರ್ಣ ಬೆಂಬಲ ನೀಡಿದರು.
ಚಿಕ್ಕವಯಸ್ಸಿನಲ್ಲೇ ವೈದ್ಯನಾಗಬೇಕು ಎಂದು ನಾನು ಬಯಸಿದ್ದೆ. ಆದರೆ ಮನೆಯವರ ಒತ್ತಾಯಕ್ಕೆ ಮಣಿದು ಇಂಜಿನಿಯರ್ ಆದೆ. ಎಂಬಿಬಿಎಸ್ ಸೀಟು ನನಗೆ, ಮತ್ತು ಮಗಳಿಗೆ ಸಿಕ್ಕಿರುವುದು ಖುಷಿಯಾಗಿದೆ ಎಂದು ಮುರುಗಯ್ಯನ್ ಹೇಳಿದ್ದಾರೆ.










