ಬೆಂಗಳೂರು : ಕಾಲೇಜು ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಫೆ. 8ಕ್ಕೆ ಮುಂದೂಡಿದೆ.
ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಮತ್ತು ತಮ್ಮ ಧಾರ್ಮಿಕ ಆಚರಣೆಗಳನ್ನು ಪಾಲಿಸುವ ವಿಚಾರದಲ್ಲಿ ಕಾಲೇಜು ಆಡಳಿತ ಮಂಡಳಿ ಮಧ್ಯ ಪ್ರವೇಶಿಸದಂತೆ ನಿರ್ದೇಶಿಸಬೇಕು ಎಂದು ಕೋರಿ ಉಡುಪಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಹೈಕೋರ್ಟ್ ಗೆ ಕಳೆದ ವಾರ ರಿಟ್ ಅರ್ಜಿ ಸಲ್ಲಿಸಿದ್ದಳು.
ನಿನ್ನೆ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಹಾಜರಾಗಿ, ಪ್ರಕರಣದಲ್ಲಿ ಅಡ್ವೋಕೇಟ್ ಜನರಲ್ ವಾದ ಮಂಡಿಸಲಿದ್ದಾರೆ. ಅದಕ್ಕಾಗಿ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಈ ವೇಳೆ ವಿದ್ಯಾರ್ಥಿಗಳ ಪರ ವಕೀಲರು ವಾದಿಸಿ, ವಿದ್ಯಾರ್ಥಿನಿಯರನ್ನು ತರಗತಿಗೆ ಸೇರಿಸುತ್ತಿಲ್ಲ. ಇದರಿಂದ ಅವರ ಕಲಿಕೆಗೆ ಸಮಸ್ಯೆಯಾಗಿದೆ. ಪ್ರಕರಣವನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು ಎಂದು ಕೋರಿದರು. ವಾದ-ಪ್ರತಿವಾದ ಆಲಿಸಿದ ಪೀಠ, ವಿಚಾರಣೆಯನ್ನು ಫೆಬ್ರವರಿ 8ಕ್ಕೆ ಮುಂದೂಡಿತು.










