ಮಗಳ ಹುಟ್ಟುಹಬ್ಬ ಆಚರಿಸಲು ಸುವರ್ಣಸೌಧ ಬಾಡಿಗೆ ಕೊಡಿ – ಸಭಾಪತಿ, ಜಿಲ್ಲಾಧಿಕಾರಿಗೆ ಪತ್ರ ಬರೆದ ತಂದೆ…

57
firstsuddi

ಬೆಳಗಾವಿ: ನನ್ನ 5 ವರ್ಷದ ಮಗಳ ಹುಟ್ಟುಹಬ್ಬ ಆಚರಿಸಲು ಸುವರ್ಣಸೌಧ ಬಾಡಿಗೆ ಕೊಡಿ ಎಂದು ವಕೀಲರೊಬ್ಬರು ಸಭಾಪತಿಗಳಿಗೆ ಮತ್ತು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾ ನಿವಾಸಿ ಹಾಗೂ ವಕೀಲ ಮಲ್ಲಿಕಾರ್ಜುನ ಚೌಕಾಶಿ ಎಂಬುವರೇ ಪತ್ರ ಬರೆದವರಾಗಿದ್ದಾರೆ.

ಪತ್ರದಲ್ಲೇನಿದೆ?: ನನ್ನ ಏಕೈಕ ಪುತ್ರಿಯಾದ ಮಣಿಶ್ರೀಗೆ ಜನವರಿ 30ಕ್ಕೆ 5 ವರ್ಷ ಮುಗಿದು 6ನೇ ವರ್ಷ ತುಂಬಲಿದ್ದು, ಅವಳು 1ನೇ ತರಗತಿಯ ಪ್ರವೇಶ ಪಡೆಯಬೇಕಿದೆ. ಇದು ಅವಳ ಜೀವನದ ಅಮೂಲ್ಯ ಕ್ಷಣ. ಹೀಗಾಗಿ ಅವಳ ಹುಟ್ಟುಹಬ್ಬವನ್ನು ಆಚರಿಸಲು ಅನುಮತಿ ನೀಡಿ. ಜೊತೆಗೆ ನಮ್ಮ ಭಾಗದಲ್ಲಿ ಚಿಕ್ಕ ಹೆಣ್ಣುಮಕ್ಕಳಿಗೆ ಹುಟ್ಟದಟ್ಟಿ ಮಾಡುವ ಪದ್ಧತಿಯಿದ್ದು, ಇದು ಕೂಡ ಜೀವನದಲ್ಲಿ ಒಮ್ಮೆ ಬರುವಂತಹದ್ದು. ಆದ್ದರಿಂದ ವರ್ಷದಲ್ಲಿ 15 ದಿನ ಕಲರವದಿಂದ ಕೂಡಿ ಉಳಿದ ದಿನ ಭೂತ ಬಂಗ್ಲೆಯಂತಿರುವ ಕರ್ನಾಟಕ ಸುವರ್ಣಸೌಧ ಸಭಾಂಗಣವನ್ನು ಬಾಡಿಗೆ ನೀಡಬೇಕು ಎಂದು ವಿನಂತಿಸಿದ್ದಾರೆ.

ಈ ರೀತಿಯ ಕಾರ್ಯಕ್ರಮಗಳಿಗೆ ಬಾಡಿಗೆ ನೀಡುವುದರಿಂದ ಸರ್ಕಾರಕ್ಕೆ ಹೊರೆಯಾಗುತ್ತಿರುವ ಆರ್ಥಿಕ ನಿರ್ವಹಣಾ ವೆಚ್ಚವನ್ನು ಉಳಿಸಬಹುದು. ಸದ್ಯಕ್ಕೆ ಅಧಿವೇಶನ ನಡೆಯುತ್ತಿದ್ದು, ಸದನದಲ್ಲಿ ಈ ವಿಷಯವನ್ನು ಚರ್ಚಿಸಿ ಬಾಡಿಗೆ ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.