ಹೈದರಾಬಾದ್ : ಕುಡಿಯಲು ಮದ್ಯ ಸಿಗದೆ ಆಲ್ಕೋಹಾಲ್ ಮಿಶ್ರಿತ ಸ್ಯಾನಿಟೈಸರ್ ಸೇವಿಸಿ 9 ಮಂದಿ ಮೃತಪಟ್ಟಿರುವ ಘಟನೆ ಆಂದ್ರಪ್ರದೇಶದ ಪ್ರಕಾಶನ್ ಜಿಲ್ಲೆಯ ಕುರಿಚೆಡು ಪಟ್ಟಣದಲ್ಲಿ ನಡೆದಿದೆ. ಮೃತರನ್ನು ಅನುಗೊಂಡ ಸ್ರೀನು(25), ಕದಿಯಾಮ್ ರಾಮನಯ್ಯ(28), ಭೋಗೆಮ್ ತಿರುಪತಯ್ಯ(35), ಬಾಬು(40), ಚಾರ್ಲೆಸ್(45) ಹಾಗೂ ಅಗಸ್ಟಿನ್(45) ಗುಂಟಕ ರಮಿ ರೆಡ್ಡಿ(60), ರಾಜ ರೆಡ್ಡಿ(65), ರಾಮನಯ್ಯ(65) ಎಂದು ಗುರುತಿಸಲಾಗಿದೆ. ಇವರಲ್ಲಿ ಮೂವರು ಭಿಕ್ಷುಕರಾಗಿದ್ದು, ಉಳಿದವರು ಸ್ಥಳೀಯ ಸ್ಲಂ ನಿವಾಸಿಗಳಾಗಿದ್ದಾರೆ. ಕುರಿಚೆಡು ಪಟ್ಟಣದಲ್ಲಿ ಮಹಾಮಾರಿ ಕೊರೊನಾ ವೈರಸ್ ಅಟ್ಟಹಾಸ ಹೆಚ್ಚಾಗುತ್ತಿರುವುದರಿಂದ ಒತ್ತಾಯಪೂರ್ವಕವಾಗಿ ಲಾಕ್‍ಡೌನ್ ಮಾಡಲಾಗಿತ್ತು. ಇದರಿಂದ ಮದ್ಯದಂಗಡಿ ತೆರೆಯದೇ ಇರುವುದರಿಂದ ಕುಡಿಯಲು ಮದ್ಯ ಸಿಗದೆ ಆಲ್ಕೋಹಾಲ್ ಮಿಶ್ರಿತ ಸ್ಯಾನಿಟೈಸರ್ ಸೇವಿಸಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.










