ಮನಸು ಮಾಡಿದ್ರೆ ನಾನು ಮುಂದೊಂದು ದಿನ ಸಿಎಂ ಆಗುತ್ತೇನೆ : ಜನಾರ್ದನ ರೆಡ್ಡಿ.

50
firstsuddi

ಬಳ್ಳಾರಿ : ಮನಸ್ಸು ಮಾಡಿದರೆ ಖಂಡಿತವಾಗಿ ನಾನು ಮುಂದೊಂದು ದಿನ ಸಿಎಂ ಆಗುತ್ತೇನೆ ಎಂದು ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಹೊರ ವಲಯದಲ್ಲಿರುವ ಕ್ಲಾಸಿಕ್ ಫಂಕ್ಷನ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ ಶಾಸಕ ಸೋಮಶೇಖರ್ ರೆಡ್ಡಿ ಹುಟ್ಟುಹಬ್ಬದ ಸಮಾರಂಭದಲ್ಲಿ ಮಾತನಾಡಿದ ಅವರು, ರೆಡ್ಡಿ, ರಾಮುಲು ಸಹೋದರರಿಗೆ ಇಂದು ದುಡ್ಡಿನ ಅವಶ್ಯಕತೆ ಇಲ್ಲ. ಮುಂದಿನ ದಿನಗಳಲ್ಲಿ ನಾನು ಮಂತ್ರಿ ಆಗಬೇಕು, ಸಿಎಂ ಆಗಬೇಕೆಂಬ ಆಸೆಯಿಲ್ಲ. ಆದರೆ ಮನಸ್ಸು ಮಾಡಿದರೆ ಖಂಡಿತವಾಗಿ ನಾನು ಸಿಎಂ ಆಗಿಯೇ ಆಗುತ್ತೇನೆ. ಅಣ್ಣ ಕರುಣಾಕರ ರೆಡ್ಡಿ ಬಳ್ಳಾರಿ ಸಾಮಾನ್ಯ ಲೋಕಸಭಾ ಕ್ಷೇತ್ರದ ಕೊನೆಯ ಸದಸ್ಯರಾಗಿ ಸಾಕಷ್ಟು ಕೆಲಸ ಮಾಡಿದರು. ಸೋಮಶೇಖರರೆಡ್ಡಿ ಬಳ್ಳಾರಿ ನಗರಸಭೆ ಅಧ್ಯಕ್ಷ ಆಗಿ ಕೆಲಸ ಮಾಡಿದರು ಎಂದು ಹೇಳಿದರು.

ನನಗೆ ಯಾರಿಗೂ ಕೊಡಲಾರದಷ್ಟು ಕಷ್ಟ ಕೊಟ್ಟರೂ ನಾನಿಂದು ನಿಮ್ಮ ಮುಂದೆ ಬಂದು ನಿಂತಿದ್ದೇನೆ. ಅಂತಹ ವಿಶೇಷ ಆಶೀರ್ವಾದ ಶ್ರೀ ಕನಕದುರ್ಗಮ್ಮ ದೇವಿ ನನಗೆ ನೀಡಿದ್ದಾಳೆ. ನನ್ನ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಇಷ್ಟೊಂದು ಸಮಸ್ಯೆ ಎದುರಿಸಲಾಗುತ್ತಿರಲಿಲ್ಲ. ನಿಮಗೆ ತೊಂದರೆ ಮಾಡಬೇಕೆಂದು ಮೇಲಿನವರ ಆದೇಶ ಇದೆ ಎಂದು ನನ್ನ ಬಂಧನಕ್ಕೆ ಬಂದಿದ್ದ ಸಿಬಿಐ ಅಧಿಕಾರಿಗಳೇ ಖುದ್ದು ಹೇಳಿದರು. ಆದರೆ, ಬಳ್ಳಾರಿಯ ಜನರಿಗೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ ಎಂದು ಹೇಳಿದ್ದರು ಎಂದು ಹಳೆಯ ವಿಚಾರಗಳನ್ನು ಮೆಲಕು ಹಾಕಿದರು.