ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್ಡಿಎ ಜಾರ್ಖಂಡ್ ಮಾಜಿ ರಾಜ್ಯಪಾಲೆ, ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಅವರನ್ನು ಅಭ್ಯರ್ಥಿಯನ್ನಾಗಿ ಪ್ರಕಟಿಸಿದೆ.
ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಕುರಿತಾಗಿ ಬಿಜೆಪಿ ಕಚೇರಿಯಲ್ಲಿ ನಿನ್ನೆ ಸಂಜೆ ನಡೆದ ಸಂಸದೀಯ ಮಂಡಳಿಯ ಸಭೆಯಲ್ಲಿ ಒಮ್ಮತದಿಂದ ದ್ರೌಪದಿ ಮುರ್ಮು ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.
ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಅವರು ಒಡಿಶಾದ ಸರಳ ಸಂತಾಲ್ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಒಡಿಶಾದ ರೈರಂಗಪುರದಲ್ಲಿ ಜಿಲ್ಲಾ ಮಂಡಳಿಯ ಕೌನ್ಸಿಲರ್ ಆಗಿ 1997ರಲ್ಲಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಮುರ್ಮು ಅವರು, ಎರಡು ಬಾರಿ ಬಿಜೆಪಿ ಶಾಸಕರಾಗಿ, ಒಂದು ಬಾರಿ ರಾಜ್ಯ ಸಚಿವರಾಗಿ ಕೆಲಸ ಮಾಡಿದ್ದಾರೆ. 2015-21ರ ಅವಧಿಯಲ್ಲಿ ಜಾರ್ಖಂಡ್ ನ ರಾಜ್ಯಪಾಲರಾಗಿದ್ದರು.
ದ್ರೌಪದಿ ಮುರ್ಮು ಅವರು ತಮ್ಮ ತವರು ರಾಜ್ಯವಾದ ಒಡಿಶಾದ ಮಯೂರ್ ಭಂಜ್ ಜಿಲ್ಲೆಯ ರಾಯರಂಗ್ಪುರದಲ್ಲಿರುವ ಶಿವನ ದೇವಾಲಯಕ್ಕೆ ಇಂದು ಭೇಟಿ ಕೊಟ್ಟಿದ್ದಾರೆ. ಈ ವೇಳೆ ದೇವರಿಗೆ ಪ್ರಾರ್ಥನೆ ಸಲ್ಲಿಸುವ ಮೊದಲು ದೇವಾಲಯದ ನೆಲವನ್ನು ಗುಡಿಸಿದ್ದಾರೆ. ಪ್ರಸ್ತುತ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.










